Home ಜಿಲ್ಲೆ ಮುದ್ನಾಳದಲ್ಲಿ ವೈಭವದಿಂದ ಜರುಗಿದ ಸದ್ಗುರು ಸಿದ್ಧಾರೂಢರ ಜಾತ್ರೆ

ಮುದ್ನಾಳದಲ್ಲಿ ವೈಭವದಿಂದ ಜರುಗಿದ ಸದ್ಗುರು ಸಿದ್ಧಾರೂಢರ ಜಾತ್ರೆ

ಯಾದಗಿರಿ:ಮಾ.13: ತಾಲೂಕಿನ ಮುದ್ನಾಳ ಗ್ರಾಮದಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ ಜಾತ್ರೆ ಮಹೋತ್ಸವವು ಭಕ್ತಿಭಾವದಿಂದ ಮತ್ತು ಸಂಭ್ರಮದ ವಾತಾವರಣದಲ್ಲಿ ವೈಭವವಾಗಿ ಜರುಗಿತು. ಬುಧವಾರ ಸಂಜೆ ನಡೆದ ಭವ್ಯ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಜಾತ್ರೆಯ ಅಂಗವಾಗಿ ಗ್ರಾಮದ ಆಂಜನೇಯ ದೇವಸ್ಥಾನದಿಂದ ಸಿದ್ಧಾರೂಢರ ಮಠದವರೆಗೆ ಮೆರವಣಿಗೆ ನಡೆಯಿತು. ಸುಮಂಗಲೆಯರು ಕಳಸ ಹೊತ್ತು ಸಾಗಿದರೆ, ಡೊಳ್ಳು, ಭಾಜಿ ಮತ್ತು ಹಲಿಗೆಗಳ ನಾದದಲ್ಲಿ ಮೆರವಣಿಗೆಗೆ ವಿಶೇಷ ಕಳೆ ಕಂಡುಬಂತು. ಮೆರವಣಿಗೆಯಲ್ಲಿ ವೀರಭದ್ರೇಶ್ವರನ ಪುರವಂತರ ಕುಣಿತ ಹಾಗೂ ಭಕ್ತರ ಭಕ್ತಿ ಘೋಷಣೆಗಳು ಜಾತ್ರೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಮೆರವಣಿಗೆ ಶ್ರೀಮಠಕ್ಕೆ ತಲುಪಿದ ಬಳಿಕ ಸ್ವಾಮೀಜಿಗಳು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಭಕ್ತರು ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ರಥೋತ್ಸವ ಗ್ರಾಮದೆಲ್ಲೆಡೆ ಸಾಗುತ್ತಿದ್ದಂತೆ ಭಕ್ತರು ರಸ್ತೆಯುದ್ದಕ್ಕೂ ಸೇರಿ ಸ್ವಾಮೀಜಿಗಳಿಗೆ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಧರ್ಮ, ಸತ್ಸಂಗ ಮತ್ತು ಸೇವೆಯ ಮಹತ್ವವನ್ನು ವಿವರಿಸಿ ಜೀವನದಲ್ಲಿ ಸದುಪದೇಶಗಳನ್ನು ಅನುಸರಿಸುವಂತೆ ಕರೆ ನೀಡಿದರು.

ಜಾತ್ರೆಯಲ್ಲಿ ಗ್ರಾಮದ ಹಿರಿಯರು, ಸಮಾಜದ ಮುಖಂಡರು ಹಾಗೂ ಯುವಕರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಜ್ಞಾನದಾಸೋಹ ಕಾರ್ಯಕ್ರಮಗಳು ಕೂಡ ನಡೆಯಿತು.

ಈ ಜಾತ್ರೆಯಲ್ಲಿ ಮುದ್ನಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿಭಾವದಿಂದ ರಥೋತ್ಸವವನ್ನು ಕಣ್ತುಂಬಿಕೊಂಡರು.