
ಬೀದರ, ಮಾ. ೨೮:ನಗರದ ರಾಂಪುರೆ ಕಾಲೋನಿಯ ಶ್ರೀ ದತ್ತಾಶ್ರಮದ ಪ್ರಾಂಗಣದಲ್ಲಿ ಗುರುವಾರ ಮಧ್ಯಾಹ್ನ ೧೨ ಗಂಟೆಗೆ ಶ್ರೀ ರಾಮನವಮಿ ಅಂಗವಾಗಿ ಶ್ರೀ ರಾಮನ ಜನ್ಮೋತ್ಸವವನ್ನು ಅತ್ಯಂತ ವಿಜೃಂಭಣೆಯಿAದ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲೆಯ ಸಾಹಿತಿ ಎಂ.ಜಿ. ದೇಶಪಾಂಡೆ ಅವರು ಮಾತನಾಡಿ, ಶ್ರೀ ರಾಮನವಮಿ ಹಿಂದುಗಳಿಗೆ ಅತ್ಯಂತ ಪವಿತ್ರ ಧಾರ್ಮಿಕ ಪರ್ವವಾಗಿದ್ದು, ಈ ದಿನ ಶಿಶು ರಾಮನ ಪ್ರತಿಮೆಯನ್ನು ತೊಟ್ಟಿಲಲ್ಲಿ ಇಟ್ಟು ಮಹಿಳೆಯರು ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ ಎಂದು ಹೇಳಿದರು. ಶ್ರೀರಾಮನು ವಿಷ್ಣುವಿನ ಏಳನೇ ಅವತಾರವಾಗಿದ್ದು, ರಾಮಾಯಣವು ಹಿಂದುಗಳ ಪವಿತ್ರ ಗ್ರಂಥವಾಗಿದೆ ಎಂದು ಅವರು ವಿವರಿಸಿದರು.
ರಾಮಾಯಣದ ಹಿನ್ನೆಲೆಯನ್ನು ವಿವರಿಸಿದ ಅವರು, ದಶರಥ ಮಹಾರಾಜನಿಗೆ ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿ ಎಂಬ ಮೂವರು ಪತ್ನಿಯರಿದ್ದು, ಸಂತಾನಲಾಭಕ್ಕಾಗಿ ಋಷಿಶೃಂಗ ಮಹರ್ಷಿಗಳ ಮಾರ್ಗದರ್ಶನದಲ್ಲಿ ಪುತ್ರಕಾಮೇಷ್ಠಿ ಯಾಗ ನಡೆಸಿದ ನಂತರ ಶ್ರೀರಾಮ, ಲಕ್ಷ್ಮಣ, ಶತ್ರುಘ್ನ ಹಾಗೂ ಭರತ ಜನಿಸಿದರೆಂದು ತಿಳಿಸಿದರು. ಶ್ರೀರಾಮನು ಸದಾ ಧರ್ಮ, ಸತ್ಯ ಹಾಗೂ ಸತ್ಸಂಗತೆಯ ಪ್ರತೀಕವಾಗಿದ್ದು, ಭಕ್ತರಿಗೆ ಸಂತಸವನ್ನು ನೀಡುವ ದೈವವಾಗಿದ್ದಾನೆ ಎಂದರು.
ಈ ಸಂದರ್ಭದಲ್ಲಿ ಓಣಿಯ ಅಕ್ಕನ ಬಳಗದ ಮಹಿಳೆಯರಾದ ಅಂಬಿಕಾ, ಶಶಿಕಲಾ, ಜಗದೇವಿ, ಶೋಭಾ, ಕವಿತಾ, ವಿಜಯಲಕ್ಷ್ಮೀ, ರಂಜನಾ, ಭಾಗ್ಯವಂತಿ, ರೇಣುಕಾ, ಸರಸ್ವತಿ ಸೇರಿದಂತೆ ಅನೇಕರು ಭಕ್ತಿಭಾವದಿಂದ ತೊಟ್ಟಿಲು ಕಾರ್ಯಕ್ರಮವನ್ನು ನೆರವೇರಿಸಿದರು.
ಕಾರ್ಯಕ್ರಮದ ಅಂಗವಾಗಿ ಭಜನೆ, ಕೀರ್ತನೆ ಹಾಗೂ ಭಕ್ತಿಗೀತೆಗಳು ನಿರಂತರವಾಗಿ ನಡೆಯಿತು. ಶ್ರೀ ಕಿರಣ ಮಹಾರಾಜರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರೆ, ಸುರೇಖಾ ಹತ್ತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಂಜುಳಾ ಮಠ ಅವರು ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು. ಕೊನೆಯಲ್ಲಿ ಎಲ್ಲರಿಗೂ ಪಾಯಸ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.




















