Home ಮುಖಪುಟ ಸುದ್ದಿ ಜನರ ಸಮಸ್ಯೆ ಪರಿಹಾರಕ್ಕೆ ಪ್ರಜಾಸೇವೆ ಇಲಾಖೆ ರಚನೆ

ಜನರ ಸಮಸ್ಯೆ ಪರಿಹಾರಕ್ಕೆ ಪ್ರಜಾಸೇವೆ ಇಲಾಖೆ ರಚನೆ

ಸಂಪುಟ ನಿರ್ಧಾರ

ಬೆಂಗಳೂರು, ಜೂ. ೨೦- ರಾಜ್ಯದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸ್ಪಂದಿಸಿ ನ್ಯಾಯ ದೊರಕಿಸಲು ಪ್ರಜಾಸೇವೆ ಇಲಾಖೆಯನ್ನು ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ೨ನೇ ಸಚಿವ ಸಂಪುಟ ಸಭೆಯಲ್ಲಿ ಪ್ರಜಾಸೇವೆ ಇಲಾಖೆಯನ್ನು ರಚಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.


ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರೆ ಖುದ್ದು ಪ್ರಜಾಸೇವೆ ಇಲಾಖೆ ರಚನೆಯನ್ನು ಪ್ರಕಟಿಸಿದರು.
ಈ ಇಲಾಖೆಗೆ ಪ್ರತ್ಯೇಕ ಸಚಿವರು, ಹಿರಿಯ ಐಎಎಸ್ ಅಧಿಕಾರಿ ಇರುತ್ತಾರೆ. ಈ ಇಲಾಖೆ ಪೋಸ್ಟಮ್ಯಾನ್ ಕೆಲಸ ಮಾಡುವುದಿಲ್ಲ. ಜನರ ಸಮಸ್ಯೆಗಳಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.


ಈ ಇಲಾಖೆಯ ಸಚಿವರು ಎಲ್ಲಾ ೨೨೪ ಕ್ಷೇತ್ರಗಳಿಗೂ ಹೋಗಿ ಶಾಸಕರ ಜತೆ ಸಭೆ ನಡೆಸಿ ಜನರ ಅಹವಾಲುಗಳನ್ನು ಆಲಿಸಿ ನ್ಯಾಯ ದೊರಕಿಸುವ ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದರು.


ವಾರಕ್ಕೊಮ್ಮೆ ಕಡ್ಡಾಯವಾಗಿ ಶಾಸಕರ ಜತೆಗೂಡಿ ಜನಸ್ಪಂದನ ಸಭೆ ನಡೆಸಿ ಅಲ್ಲಿನ ಅಭಿಪ್ರಾಯಗಳನ್ನು ನಮಗೆ ತಲಪಿಸುತ್ತಾರೆ. ಅದಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.


ಕಟ್ಟಡ ಪೂರ್ಣಗೊಂಡು ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವವರು ಒಸಿ, ಸಿಸಿ ಪಡೆಯಲು ಇನ್ನು ೧೫ ದಿನ ಕಾಲಾವಕಾಶ ತೀರ್ಮಾನವನ್ನು ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.


ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಕೆಐಎಡಿಬಿಗೆ ಸ್ವಯಂ ಪ್ರೇರಿತವಾಗಿ ಜಮೀನು ನೀಡಲು ಇದ್ದ ಕಾಲಾವಕಾಶವನ್ನು ವಿಸ್ತರಣೆ ಮಾಡುವ ತೀರ್ಮಾನವನ್ನು ಸಂಪುಟ ಕೈಗೊಂಡಿದೆ ಎಂದು ಅವರು ತಿಳಿಸಿದರು.


ದೆಹಲಿಯಲ್ಲಿ ೮೦ ಕೋಟಿ ರೂ. ವೆಚ್ಚದಲ್ಲಿ ದೆಹಲಿ ಕರ್ನಾಟಕ ಭವನ-೪ ಅನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಈ ಭವನದಲ್ಲಿ ಯುಪಿಎಸ್‌ಸಿ ತಯಾರಿ ಮಾಡಿಕೊಳ್ಳುವವರಿಗೆ ವಸತಿ ಕಲ್ಪಿಸುವ ಉದ್ದೇಶವಿದ್ದು, ಶೇ. ೫೦ ರಷ್ಟು ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿರಿಸಲಾಗುವುದು ಎಂದು ಅವರು ಹೇಳಿದರು.


ಬಸ್ ದರ: ಶೀಘ್ರ ತೀರ್ಮಾನ


ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ದರ ಹೆಚ್ಚಳದ ಬಗ್ಗೆ ಪ್ರಸ್ತಾವನೆ ಬಂದಿದೆ. ಜನರಿಗೂ ಒಳ್ಳೆಯದಾಗಬೇಕು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೂಡ ಉಳಿಯಬೇಕು. ಆದಷ್ಟು ಬೇಗ ಈ ಬಗ್ಗೆ ತೀರ್ಮಾನ ಮಾಡುವುದಾಗಿ ಅವರು ಹೇಳಿದರು.


ಬಿಡದಿ ಟೌನ್ ಶಿಪ್‌ಗೆ ಜೆಡಿಎಸ್ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಈ ಬಗ್ಗೆ ಮಾತನಾಡಲ್ಲ. ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದ್ದರೋ ಅದನ್ನು ನಾನು ಮುಂದುವರೆಸುತ್ತಿದ್ದೇನೆ ಅಷ್ಟೇ. ರಾಜಕಾರಣಕ್ಕಾಗಿ ಅವರು ಇದೆಲ್ಲಾ ಮಾಡುತ್ತಿದ್ದಾರೆ. ಯಾರಿಗೂ ನಾನು ಬಲವಂತ ಮಾಡುತ್ತಿಲ್ಲ. ಭೂಮಿ ಡಿನೋಟಿಫೈ ಮಾಡಿ ನಾನು ಜೈಲಿಗೆ ಹೋಗಲು ತಯಾರಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.


ಯಾದಗಿರಿಯಲ್ಲಿ ೧೦೦ ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಅನುಮೋದನೆ ನೀಡಿದೆ. ಹಾಗೆಯೇ ಸಂಡೂರಿನಲ್ಲಿ ೩೦ ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣಕ್ಕೂ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.


ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸದಾಗಿ ೪೦೦ ಬಸ್ ಖರೀದಿಸಲು ಒಪ್ಪಿಗೆ ನೀಡಿದ್ದೇವೆ. ಹಾಗೆಯೇ ವಾಯುವ್ಯ ಸಾರಿಗೆ ಸಂಸ್ಥೆಗೂ ೨೨೦ ಹೊಸ ಬಸ್‌ಗಳ ಖರೀದಿಗೂ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.