
ಬೆಂಗಳೂರು.ಜೂ೨೦: ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿನ ರೈತರಿಗೂ ಅತ್ಯಂತ ಅನುಕೂಲಕರವಾದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ವಿಧಾನಸೌಧದಲ್ಲಿ ತಿಳಿಸಿದ್ದಾರೆ.
ರಾಜ್ಯದ ಪ್ರಸ್ತುತ ಜಲಕ್ಷಾಮ ಹಾಗೂ ಮೇಕೆದಾಟು ಯೋಜನೆಗೆ ಎದುರಾಗಿರುವ ಕಾನೂನು ಹೋರಾಟಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಕೀಯ ಮರೆತು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಾದ ಅಗತ್ಯವಿದೆ ಎಂದು ಕರೆ ನೀಡಿದರು.
“ಮೇಕೆದಾಟು ಹೊಸದಾಗಿ ನೀರನ್ನು ಬಳಸಿಕೊಳ್ಳುವ ಯೋಜನೆಯಲ್ಲ, ಇದು ಕೇವಲ ನೀರನ್ನು ಸಂಗ್ರಹಿಸಿಡುವ (ಬ್ಯಾಲೆನ್ಸಿಂಗ್ ರಿಸರ್ವಾಯರ್) ಯೋಜನೆ ಅಷ್ಟೇ. ಇದರಿಂದ ಕೃಷಿಗೆ ನೀರು ಸಿಗದಿದ್ದರೂ, ಬೆಂಗಳೂರು ನಗರದ ಜನತೆಗೆ ೪.೭೫ ಟಿಎಂಸಿ ಕುಡಿಯುವ ನೀರು ಲಭ್ಯವಾಗಲಿದೆ. ಜೊತೆಗೆ ೪೦೦ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು.” ಎಂದು ಸಚಿವರು ವಿವರಿಸಿದರು.
ನಾಲ್ಕೈದು ವರ್ಷಗಳಿಗೊಮ್ಮೆ ಮಳೆ ಕೊರತೆಯಾದಾಗ ಈ ಜಲಾಶಯ ನೆರವಿಗೆ ಬರಲಿದೆ. ಕೇಂದ್ರ ನಿಯಮಗಳ ಪ್ರಕಾರ ತಮಿಳುನಾಡಿಗೆ ಪ್ರತಿ ತಿಂಗಳು ನಿಗದಿತ ಪ್ರಮಾಣದ ನೀರನ್ನು ಬಿಡಬೇಕಾಗುತ್ತದೆ. ಜೂನ್ ತಿಂಗಳಿನಲ್ಲಿ ೯.೧೯ ಟಿಎಂಸಿ ನೀರು ಬಿಡಬೇಕಾಗಿದ್ದು, ಸದ್ಯಕ್ಕೆ ೨ ಟಿಎಂಸಿ ಮಾತ್ರ ಹರಿಸಲಾಗಿದೆ. ಪ್ರಸ್ತುತ ನಮ್ಮ ಬಳಿ ಕೇವಲ ೩ ಟಿಎಂಸಿ ನೀರು ಮಾತ್ರ ಲಭ್ಯವಿದೆ (ಜೂನ್ ೧೮ರ ವರದಿಯಂತೆ). ಮೇಕೆದಾಟು ಜಲಾಶಯ ನಿರ್ಮಾಣವಾಗಿದ್ದರೆ, ಈಗಿನ ಸಂಕಷ್ಟದ ಸಮಯದಲ್ಲಿ ಅವರಿಗೆ ನೀರು ಬಿಡಲು ಸುಲಭವಾಗುತ್ತಿತ್ತು. ಇದು ಅಲ್ಲಿನ ರೈತರಿಗೂ ನೆರವಾಗುತ್ತಿತ್ತು ಎಂದರು.
ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮುಖ್ಯ ಅರ್ಜಿ ಹಾಗೂ ಮರುಪರಿಶೀಲನಾ (ರಿವ್ಯೂ) ಅರ್ಜಿ ಎರಡನ್ನೂ ನ್ಯಾಯಾಲಯ ವಜಾಗೊಳಿಸಿದೆ. ಆದರೂ ಅಲ್ಲಿನ ಮುಖ್ಯಮಂತ್ರಿಗಳು ಹೋರಾಟದ ಮಾತನಾಡುತ್ತಿದ್ದಾರೆ. ತಮಿಳುನಾಡಿಗೆ ಹಂಚಿಕೆಯಾಗಿರುವ ನೀರಿನಲ್ಲಿ ನಮಗೆ ಒಂದು ಹನಿಯೂ ಬೇಡ, ನಮಗೆ ಸಿಗಬೇಕಾದ ಅಲೋಕೇಶನ್ ನೀರು ನಮಗೆ ಸಾಕು. ಈಗಾಗಲೇ ಈ ಯೋಜನೆಯ ಡಿಪಿಆರ್ (ಆPಖ) ಸಿದ್ಧವಾಗಿದೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು.
ಇತ್ತೀಚೆಗಷ್ಟೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಹದಾಯಿ ಮತ್ತು ಮೇಕೆದಾಟು ಯೋಜನೆಗಳ ಕುರಿತು ಚರ್ಚಿಸಲಾಗಿದೆ. ತಮಿಳುನಾಡು ಮುಖ್ಯಮಂತ್ರಿಗಳು ಹಾಗೂ ನಮ್ಮನ್ನು ಒಟ್ಟಿಗೆ ಕೂರಿಸಿ ಮಾತುಕತೆ ನಡೆಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ನ್ಯಾಯಾಲಯದ ಮೆಟ್ಟಿಲೇರುವುದಕ್ಕಿಂತ ಉಭಯ ರಾಜ್ಯಗಳು ಒಟ್ಟಿಗೆ ಕುಳಿತು ಮಾತನಾಡುವುದು ಸೂಕ್ತ. ಕಳೆದ ೧೩-೧೪ ವರ್ಷಗಳಿಂದ ಬಗೆಹರಿಯದ ಕೃಷ್ಣಾ ನದಿ ನೀರಿನ ವಿವಾದಕ್ಕೂ ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆದಾಗ್ಯೂ, ಸದ್ಯಕ್ಕೆ ಕುಡಿಯುವ ನೀರಿಗೆ ಮುಂದಿನ ಎರಡು ತಿಂಗಳು ಯಾವುದೇ ಸಮಸ್ಯೆಯಿಲ್ಲ. ಕೆಆರ್‌ಎಸ್ (ಏಖS) ಜಲಾಶಯದಲ್ಲಿ ೧೧ ಟಿಎಂಸಿ ನೀರಿದ್ದು, ಕಬಿನಿಯಲ್ಲೂ ಉತ್ತಮ ನೀರಿದೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
“ಚುನಾವಣೆ ಮುಗಿದ ಮೇಲೆ ವಿರೋಧಗಳನ್ನು ಮರೆಯಬೇಕು. ನೀರು ಪಡೆದುಕೊಳ್ಳುವ ಹಕ್ಕಿನ ವಿಚಾರದಲ್ಲಿ ಎಲ್ಲರೂ ಪಕ್ಷಾತೀತವಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.





























