Home Lead News ಹಾಲು ದರ ಏರಿಕೆಗೆ ಜನಾಕ್ರೋಶ

ಹಾಲು ದರ ಏರಿಕೆಗೆ ಜನಾಕ್ರೋಶ

ಬೆಂಗಳೂರು:ಅ,೩೦-ದೀಪಾವಳಿ ಹಬ್ಬದ ಸಂದರ್ಭದಲ್ಲೇ ರಾಜ್ಯದಲ್ಲಿ ನವೆಂಬರ್ ೧ರಿಂದ ಜಾರಿಗೆ ಬರಲಿರುವ ನಂದಿನಿ ಹಾಲಿನ ದರ ಭಾರೀ ಪ್ರ,ಮಾಣದಲ್ಲಿ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗಿದೆ. ಮುಂದಿನ ವಾರ ಬಸ್ ಪ್ರಯಾಣ ದರವೂ ಏರಿಕೆಯಾಗಲಿದ್ದು, ಶ್ರೀಸಾಮಾನ್ಯ ಜೀಬಿಗೆ ಕತ್ತರಿ ಬೀಳಲಿದೆ.


ಅಕ್ಕಿ ದರ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಹಾಲಿನ ದರ ಹೆಚ್ಚವಾಗಿರವುದು ಜನತೆಗೆ ಭಾರೀ ಹೊಡೆತ ಬಿದ್ದಿದೆ.
ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಜನರು ಆಕ್ರೋಶ ಹೊರಹಾಕಿದ್ದಾರೆ. ಮಧ್ಯಮ ವರ್ಗದ ಕುಟುಂಬಗಳ ಬಜೆಟ್‌ಗೆ ಇದರಿಂದ ಮತ್ತಷ್ಟು ಹೊರೆಯಾಗಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.


ನಿತ್ಯದ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಹಾಲಿನ ಬೆಲೆಯನ್ನೇ ಈ ಪ್ರಮಾಣದಲ್ಲಿ ಹೆಚ್ಚಿಸಿದರೆ ಮಕ್ಕಳಿಗೆ ಹಾಲು ಕೊಡಿಸುವುದೂ ಕಷ್ಟವಾಗಲಿದೆ ಎಂಬುದು ಸಾರ್ವಜನಿಕರ ಅಳಲು. “ಕಾಫಿ, ಟೀ ಕುಡಿಯುವುದನ್ನೇ ಬಿಡಬೇಕಷ್ಟೇ. ಅಗತ್ಯ ವಸ್ತುಗಳ ಬೆಲೆಯನ್ನು ಹೀಗೆ ಏರಿಸುತ್ತ ಹೋದರೆ ಸಾಮಾನ್ಯ ಜನರು ಬದುಕುವುದಾದರೂ ಹೇಗೆ? ಸಂಬಳ ಮಾತ್ರ ಹೆಚ್ಚಾಗುವುದಿಲ್ಲ, ಆದರೆ ಬೆಲೆ ಏರಿಕೆ ಮಾತ್ರ ನಿರಂತರವಾಗಿ ನಡೆಯುತ್ತಿದೆ” ಎಂದು ಜನರು ಕಿಡಿಕಾರಿದ್ದಾರೆ.


ನಂದಿನಿ ಹಾಲಿನ ದರ ಏರಿಕೆ ಹಿನ್ನೆಲೆಯಲ್ಲಿ ಬೆಂಗಳೂರು ಹೋಟೆಲ್‌ಗಳ ಸಂಘವೂ ಸರ್ಕಾರದ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಂಘ, ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ೮ರೂ ಏಕಾಏಕಿ ಹೆಚ್ಚಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ.


ಹಾಲಿನ ದರ ಏರಿಕೆಯನ್ನು ೨ ರೂ ರಿಂದ ೩ ರೂ ಕ್ಕೆ ಸೀಮಿತಗೊಳಿಸಿದರೆ ಹೋಟೆಲ್‌ಗಳಲ್ಲಿ ಕಾಫಿ, ಟೀ ಹಾಗೂ ತಿಂಡಿ-ತಿನಿಸುಗಳ ಬೆಲೆ ಹೆಚ್ಚಿಸುವ ಅನಿವಾರ್ಯತೆ ಎದುರಾಗುವುದಿಲ್ಲ ಎಂದು ಸಂಘ ಅಭಿಪ್ರಾಯಪಟ್ಟಿದೆ. ಆದರೆ ಈಗ ಹಾಲಿನ ದರವನ್ನ ಗಣನೀಯ ಪ್ರಮಾಣದಲ್ಲಿ ಸರ್ಕಾರ ಹೆಚ್ಚಳ ಮಾಡಿದೆ.ಕೇವಲ ಕಾಫಿ,ಟೀ, ಮಾತ್ರವಲ್ಲ. ಹಾಲಿನದಿಂದ ತಯಾರಿಸುವ ಪದಾರ್ಥಗಳ ದರವೂ ಏರಿಕೆ ಅನಿವಾರ್ಯವಾಗಿದೆ ಎಂದು ಹೋಟೆಲ್ ಗಳ ಮಾಲೀಕರು ಸುಳಿವು ನೀಡಿದ್ದಾರೆ. ಕಾಫಿ, ಟೀ, ಇನ್ನಿತರ ತಿಂಡಿ ತಿನಿಸುಗಳ ದರ ಹೆಚ್ಚಳವಾಗಲಿದೆ. ಹೀಗಾಗಿ ಜನರ ಜೇಬಿಗೆ ದೊಡ್ಡ ಪ್ರಮಾಣದಲ್ಲಿ ಕತ್ತರಿ ಬೀಳುವುದು ನಿಶ್ಚಿತ.

ಈಗಾಗಲೇ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಹೋಟೆಲ್ ಉದ್ಯಮದ ಮೇಲೂ ಒತ್ತಡ ಹೆಚ್ಚಾಗಿದೆ. ಹಾಲು ಮತ್ತು ಅಕ್ಕಿಯ ಬೆಲೆ ಏರಿಕೆಯ ಪರಿಣಾಮವಾಗಿ ಕಾಫಿ, ಟೀ ಹಾಗೂ ತಿಂಡಿ-ತಿನಿಸುಗಳ ದರ ಪರಿಷ್ಕರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.


ಹಾಲು ಕೇವಲ ಆಹಾರ ಪದಾರ್ಥವಲ್ಲ; ಮಕ್ಕಳ ಬೆಳವಣಿಗೆ, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರ ಪೌಷ್ಟಿಕ ಆಹಾರದ ಪ್ರಮುಖ ಭಾಗವಾಗಿದೆ. ಇಂತಹ ಅಗತ್ಯ ವಸ್ತುವಿನ ಬೆಲೆ ಏರಿಕೆಯು ಆರ್ಥಿಕವಾಗಿ ದುರ್ಬಲ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಹೊರೆಯಾಗಲಿದೆ ಎಂದು ಹೋಟೆಲ್‌ಗಳ ಸಂಘ ಆತಂಕ ವ್ಯಕ್ತಪಡಿಸಿದೆ.
ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸಲು ಸರ್ಕಾರವೇ ಪ್ರೋತ್ಸಾಹಿಸಬೇಕು. ಡೈರಿ ಉದ್ಯಮದ ಆಡಳಿತಾತ್ಮಕ ವೆಚ್ಚವನ್ನು ನಿಯಂತ್ರಿಸುವುದರ ಜೊತೆಗೆ ರೈತರಿಗೆ ಪ್ರೋತ್ಸಾಹಧನ ನೀಡುವ ಮೂಲಕ ಗ್ರಾಹಕರ ಮೇಲಿನ ಬೆಲೆ ಏರಿಕೆಯ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.


ಸಂಘದ ಪ್ರಕಟಣೆಯಲ್ಲಿ ನೀಡಿರುವ ದರಗಳ ಪ್ರಕಾರ, ಅರ್ಧ ಲೀಟರ್ ಟೋನ್ಡ್ ಹಾಲಿನ ಬೆಲೆ ೨೩ರಿಂದ ?೨೭ಕ್ಕೆ ಏರಿಕೆಯಾಗಲಿದೆ. ಹಸಿರು ಪ್ಯಾಕೆಟ್‌ನ ಹೊಮೊಜೈನೈಸ್ಡ್ ಹಾಲು, ಶುಭಂ ಹಾಲು, ಸ್ಪೆಷಲ್ ಹಾಲು ಹಾಗೂ ಗುಡ್ ಲೈಫ್ ಹಾಲಿನ ದರಗಳಲ್ಲಿಯೂ ಹೆಚ್ಚಳವಾಗಲಿದೆ.


ಹಾಲಿನ ದರ ಏರಿಕೆಯ ನಿರ್ಧಾರವನ್ನು ಸರ್ಕಾರ ಮರುಪರಿಶೀಲಿಸಿ ಜನಸಾಮಾನ್ಯರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರು ಹಾಗೂ ಹೋಟೆಲ್ ಉದ್ಯಮದ ಒತ್ತಾಯವಾಗಿದೆ.


ಹಾಲಿನ ದರ ಏರಿಕೆ ಕೇವಲ ಮನೆಗಳ ಅಡುಗೆಮನೆಯ ಬಜೆಟ್‌ಗೆ ಮಾತ್ರವಲ್ಲದೆ ಹೋಟೆಲ್ ಉದ್ಯಮಕ್ಕೂ ಬಿಸಿ ಮುಟ್ಟಿಸುವ ಆತಂಕ ಸೃಷ್ಟಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಸರ್ಕಾರದ ಈ ನಿರ್ಧಾರ ಜನರ ಅಸಮಾಧಾನಕ್ಕೆ ಕಾರಣವಾಗಿದೆ.