Home ಜಿಲ್ಲೆ ಕಲಬುರಗಿ ನ. 01 ರಂದು ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಅವರ...

ನ. 01 ರಂದು ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಅವರ ಜನ್ಮದಿನಾಚರಣೆ

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಅವರ ಜನ್ಮದಿನಾಚರಣೆಯನ್ನು, ರಾಜ್ಯೋತ್ಸವ ದಿನವಾದ ನವೆಂಬರ್ 01 ರಂದು ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ಧಾರ್ಮಿಕ ಶ್ರದ್ಧೆ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಆಚರಿಸಲಾಗುವುದು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು ಶುಕ್ರವಾರ ಕಲಬುರಗಿಯಲ್ಲಿ ನೀಡಿದ ಹೇಳಿಕೆಯಲ್ಲಿ, ನವೆಂಬರ್ 01 ರಂದು ಜನಿಸಿದ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ನವೆಂಬರ್ 22 ರಂದು ಜನಿಸಿದ ಡಾ. ದಾಕ್ಷಾಯಣಿ ಅವ್ವಾಜಿಯವರ ಜನ್ಮದಿನಗಳನ್ನು, ನವೆಂಬರ್ 01 ರಂದೇ ಒಟ್ಟಾಗಿ ಹಾಗೂ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಂಘ ಮತ್ತು ಶರಣಬಸವೇಶ್ವರ ದೇವಾಲಯದ ಭಕ್ತರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ನವೆಂಬರ್ 01 ರ ಬೆಳಿಗ್ಗೆ, ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ಡಾ. ದಾಕ್ಷಾಯಣಿ ಅವ್ವಾಜಿ ಅವರ ಜನ್ಮದಿನದ ಅಂಗವಾಗಿ, ಶರಣಬಸವೇಶ್ವರ ದೇವಾಲಯದಲ್ಲಿ ಭಕ್ತರು ಲಿಂಗ ಪೂಜೆ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.
ಮುಖ್ಯ ಸಮಾರಂಭ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಶರಣಬಸವ ವಿಶ್ವವಿದ್ಯಾಲಯ, ಅಖಿಲ ಭಾರತ ಶಿವಾನುಭವ ಮಂಟಪ, ಜಿಲ್ಲಾ ವೀರಶೈವ ಸಮಾಜ ಹಾಗೂ ಶರಣಬಸವೇಶ್ವರ ಸಂಸ್ಥಾನದ ಸಮಸ್ತ ಭಕ್ತಾದಿಗಳ ಸಂಯುಕ್ತಾಶ್ರಯದಲ್ಲಿ ನವೆಂಬರ್ 01ರಂದು ಸಂಜೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅನುಭವ ಮಂಟಪದಲ್ಲಿ ನಡೆಯಲಿದೆ.
ಹುಬ್ಬಳ್ಳಿಯ ಶ್ರೀ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಶ್ರೀಶೈಲ ಸಾರಂಗಮಠದ ಜಗದ್ಗುರು ಡಾ. ಸಾರಂಗದರ ದೇಶಿಕೇಂದ್ರ ಮಹಾಸ್ವಾಮಿಗಳು ಜಂಟಿಯಾಗಿ ಜನ್ಮದಿನೋತ್ಸವವನ್ನು ಉದ್ಘಾಟಿಸುವರು ಎಂದು ಶ್ರೀ ದೇಶಮುಖ ಹೇಳಿದರು. ಚೌಡಾಪುರಿ ಹಿರೇಮಠದ ರಾಜಶೇಖರ ಮಹಾಸ್ವಾಮಿಗಳು, ಮುಗಳನಾಗವಿಯ ಕಟ್ಟಿಮನಿ ಹಿರೇಮಠದ ಸಂಸ್ಥಾನದ ಪೂಜ್ಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಶ್ರೀ ಅರುಣಕುಮಾರ ಪಾಟೀಲ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಪೂಜ್ಯ ದೊಡ್ಡಪ್ಪ ಅಪ್ಪ ಹಾಗೂ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಇಬ್ಬರಿಗೂ ಭಕ್ತರು ತುಲಾಭಾರ ಸಮರ್ಪಿಸುತ್ತಿರುವುದು ಜನ್ಮದಿನೋತ್ಸವದ ವಿಶೇಷವಾಗಿದೆ. ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ಪೂಜ್ಯ ದೊಡ್ಡಪ್ಪ ಅಪ್ಪ ಹಾಗೂ ಮಾತೋಶ್ರೀ ಡಾಕ್ಷಾಯಿಣಿ ಅವ್ವಾಜಿ ಅವರ ತುಲಾಭಾರವನ್ನು ಪ್ರತ್ಯೇಕವಾಗಿ ನಾಣ್ಯದಲ್ಲಿ ತುಲಾಭಾರ ಮಾಡಿದರೆ, ಶ್ರೀಮತಿ ಮಾಣಿಕಮ್ಮ ಹಾಗೂ ಶ್ರೀ ಮಡಿವಾಳಯ್ಯನವರು ಪ್ರತ್ಯೇಕವಾಗಿ ಪವಿತ್ರ ರುದ್ರಾಕ್ಷಿಗಳೊಂದಿಗೆ ತುಲಾಭಾರ ಸಮರ್ಪಿಸಲಿದ್ದಾರೆ.
ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಅವರು ಬರೆದಿರುವ “ಪೂಜ್ಯ ಡಾ ಅವ್ವಾಜಿಯವರ ಚಿತ್ರಾತ್ಮಕ ಜೀವನ ಚರಿತ್ರೆ” ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆಯುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಪವಿತ್ರ ದೇಗುಲದ ಭಕ್ತಾದಿಗಳು, ಪೂಜ್ಯ ದೊಡ್ಡಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ.