
ವಿಜಯಪುರ, ನ.9: ಕನ್ನಡ ಭಾಷೆಗೆ ಎರಡು ಸಾವಿರದ ಐನೂರು ವರ್ಷಗಳಿಗೂ ಮಿಗಿಲಾದ ಗಟ್ಟಿಯಾದ ಇತಿಹಾಸವಿದ್ದು, ಕನ್ನಡ ನಾಡು, ನುಡಿಯ ರಕ್ಷಣೆಯೊಂದಿಗೆ ನಾಡಿನ ಶ್ರೀಮಂತ ಸಾಂಸ್ಕøತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದು ಸಾಹಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಹೇಳಿದರು.
ನಗರದ ಹೊರವಲಯದ ಹಿಟ್ಟಿನಹಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ಕನ್ನಡ ಸಂಘ ಹಾಗೂ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಕ್ರಿಸ್ತಪೂರ್ವ ಎರಡನೇ ಶತಮಾನದಿಂದಲೂ ಅಸ್ತಿತ್ವದಲ್ಲಿದ್ದ ಕನ್ನಡ ಭಾಷೆ, ತನ್ನ ಸಾಹಿತ್ಯಿಕ ಶ್ರೀಮಂತಿಕೆ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯದಿಂದ ವಿಶಿಷ್ಟ ಸ್ಥಾನ ಪಡೆದಿದೆ ಎಂದರು.
ಮೂವರು ರಾಷ್ಟ್ರಕವಿಗಳು ಹಾಗೂ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ನೀಡಿದ ಹೆಗ್ಗಳಿಕೆ ಕನ್ನಡ ನಾಡಿಗಿದೆ. ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶೆ, ಪ್ರವಾಸ ಸಾಹಿತ್ಯ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕನ್ನಡದ ಕವಿಗಳು ಮತ್ತು ಸಾಹಿತಿಗಳು ಅಪಾರ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ಕನ್ನಡ ಭಾಷೆ ಕಾಲಕಾಲಕ್ಕೆ ಹೊಸ ಆಯಾಮಗಳನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.
ನಾಡಿನ ವಿವಿಧ ಭಾಗಗಳಲ್ಲಿ ಕನ್ನಡದ ಕಟ್ಟಾಳುಗಳು ಭಾಷೆಯ ಅಸ್ಮಿತೆಗಾಗಿ ಶ್ರಮಿಸಿದ್ದಾರೆ. ಭಾಷಾವಾರು ಪ್ರಾಂತ ರಚನೆಯ ಹೋರಾಟದಿಂದ ಕನ್ನಡ ಭಾಷೆಗೆ ಸ್ವತಂತ್ರ ಅಸ್ತಿತ್ವ ಹಾಗೂ ನಾಡಿಗೆ ಏಕೀಕರಣದ ರೂಪ ದೊರೆತಿದೆ. ಕನ್ನಡಿಗರಾದ ನಾವು ಒಂದಾಗಿ ನಾಡಿನ ಕೀರ್ತಿಯ ಪತಾಕೆಯನ್ನು ಎತ್ತರಕ್ಕೆ ಹಾರಿಸುವುದರ ಜತೆಗೆ ನಾಡು, ನುಡಿ, ನೆಲ, ಜಲ ಮತ್ತು ಭಾಷೆಯ ಸಂರಕ್ಷಣೆಗೆ ಸ್ವಾಭಿಮಾನದಿಂದ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಡಳಿತ ಮಂಡಳಿ ಸದಸ್ಯೆ ಪಾರ್ವತಿ ಕುಲಕರ್ಣಿ, ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಶ್ರೀಮಂತ ಪರಂಪರೆ ಹೊಂದಿದೆ. ಹಲವು ಸಾಹಿತ್ಯ ಪ್ರಕಾರಗಳ ಮೂಲಕ ಕನ್ನಡ ಭಾಷೆ ತನ್ನದೇ ಆದ ಮಹತ್ವವನ್ನು ಗಳಿಸಿಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ. ಎಂ.ಎಂ. ಜಮಾದಾರ ಮಾತನಾಡಿ, ನಮ್ಮ ಕೃಷಿ ಮಹಾವಿದ್ಯಾಲಯದಲ್ಲಿ ಅತ್ಯಂತ ಅಭಿಮಾನದಿಂದ 71ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ. ಕನ್ನಡ ಸಾಹಿತ್ಯದ ಮೂಲಕ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯ ಎಲ್ಲರಿಂದಲೂ ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಜಿ.ಎಂ. ಸಜ್ಜನರ, ಡಾ. ರಾಜಕುಮಾರ ಜೊಳ್ಳಿ, ಡಾ. ಪಿ.ಎಸ್. ಪತ್ತಾರ ಸೇರಿದಂತೆ ಹಲವರು ಉಪಸ್ಥಿತರಿದ್ದು ಮಾತನಾಡಿದರು.
ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಮಹಾವಿದ್ಯಾಲಯದ ಪ್ರವೇಶದ್ವಾರದಿಂದ ಮುಖ್ಯ ವೇದಿಕೆಯ ಸಭಾಂಗಣದವರೆಗೆ ಕನ್ನಡಾಂಬೆಯ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕನ್ನಡಾಭಿಮಾನದ ಗೀತೆಗಳನ್ನು ಹಾಡುವ ಮೂಲಕ ಸಂಭ್ರಮಿಸಿದರು.
ಇಡೀ ಮಹಾವಿದ್ಯಾಲಯ ಕನ್ನಡದ ಬಾವುಟ, ಕನ್ನಡದ ಹಾಡು ಹಾಗೂ ಕನ್ನಡಾಭಿಮಾನದ ಘೋಷಣೆಗಳಿಂದ ಕಂಗೊಳಿಸಿತು. 71ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಕನ್ನಡಮಯ ವಾತಾವರಣದಲ್ಲಿ ಆಚರಿಸಲಾಯಿತು.





















