
ಚೆನ್ನೈ, ಮೇ ೬- ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಟಿವಿಕೆ ಮುಖ್ಯಸ್ಥ ನಟ ವಿಜಯ್ ಅವರ ಪಟ್ಟಾಭಿಷೇಕಕ್ಕೆ ಸಿದ್ಧತೆಗಳು ನಡೆದಿರುವಾಗಲೇ ತಮಿಳುನಾಡಿನ ರಾಜಕೀಯ ನಾನಾ ತಿರುವು ತೆಗೆದುಕೊಳ್ಳುತ್ತಿದ್ದು ಒಂದೆಡೆ ತಮಿಳುನಾಡಿನ ಸಣ್ಣ ಸಣ್ಣ ಪಕ್ಷಗಳು ನಟ ವಿಜಯ್ ಅವರ ಬೆಂಬಲಕ್ಕೆ ನಿಂತಿದ್ದರೆ ಎಐಎಡಿಎಂಕೆ ಪಕ್ಷದಲ್ಲೂ ನಟ ವಿಜಯ್ ಅವರಿಗೆ ಬೆಂಬಲ ನೀಡಬೇಕೆಂಬ ಒತ್ತಡಗಳು ಹೆಚ್ಚಾಗಿವೆ. ತಮಿಳುನಾಡಿನಲ್ಲಿ ಒಂದು ರೀತಿಯ ರಾಜಕೀಯ ಧೃವೀಕರಣ ನಡೆದಿದ್ದು ಸಣ್ಣ ಪುಟ್ಟ, ದೊಡ್ಡ ಪಕ್ಷಗಳಲ್ಲೂ ನಟ ವಿಜಯ್‌ಗೆ ಬೆಂಬಲದ ವಾತಾವರಣ ರೂಪುಗೊಂಡಿದೆ.
ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಾಳೆ ಇಲ್ಲವೇ ನಾಡಿದ್ದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲರನ್ನು ಇಂದು ಸಂಜೆ ಭೇಟಿ ಮಾಡಿದ ನಂತರ ಪ್ರಮಾಣ ವಚನ ದಿನಾಂಕ, ಸಮಯ ನಿಗದಿಯಾಗಲಿದೆ.
ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಟ ವಿಜಯ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಪ್ರಮಾಣ ವಚನಕ್ಕೆ ಮುನ್ನವೇ ಬಹುಮತದ ಕೊರತೆ ನೀಗಿಸಿಕೊಳ್ಳುವ ವಿಜಯ್ ಅವರ ಪ್ರಯತ್ನಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು, ಒಂದೆರಡು ಸ್ಥಾನ ಗೆದ್ದಿರುವ ಸ್ಥಳೀಯ ಪಕ್ಷಗಳ ಜೊತೆಗೆ ಎಐಎಡಿಎಂಕೆಯಲ್ಲೂ ಬೆಂಬಲ ನೀಡುವ ಚರ್ಚೆಗಳು ನಡೆದಿವೆ.
ತಮಿಳುನಾಡಿನಲ್ಲಿ ಹೊಸ ಜನನಾಯಕನಾಗಿ ಉದಯಿಸಿರುವ ಟಿವಿಕೆ ಪಕ್ಷದ ವಿಜಯ್ ಅವರಿಗೆ ಬೆಂಬಲ ನೀಡುವ ವಿಚಾರದಲ್ಲಿ ಎಐಎಡಿಎಂಕೆ ಇಬ್ಭಾಗದತ್ತ ಸಾಗಿದ್ದು ನಟ ವಿಜಯ್ ಅವರಿಗೆ ಬೆಂಬಲ ನೀಡಬೇಕೆಂದು ಬಹುತೇಕ ಎಐಎಡಿಎಂಕೆ ಶಾಸಕರು ಒಲವು ತೋರಿದ್ದು ಇದಕ್ಕೆ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿರುವುದರಿಂದ ಎಐಎಡಿಎಂಕೆ ಎರಡು ಹೋಳಾಗುವ ಸಾಧ್ಯತೆಗಳು ಹೆಚ್ಚಿವೆ.
ನಟ ವಿಜಯ್ ಅವರಿಗೆ ಬೆಂಬಲ ನೀಡುವ ವಿಚಾರದಲ್ಲಿ ಎಐಎಡಿಎಂಕೆ ಭಿನ್ನಾಭಿಪ್ರಾಯಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ನೂತನ ಶಾಸಕರ ಸಭೆಯನ್ನು ಮುಂದೂಡಲಾಗಿದೆ.
ನಟ ವಿಜಯ್ ಅವರಿಗೆ ಬೆಂಬಲ ನೀಡುವ ವಿಚಾರದಲ್ಲಿ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ತೀರ್ಮಾನ ತೆಗೆದುಕೊಳ್ಳದಿದ್ದರೆ ೩೦ಕ್ಕೂ ಹೆಚ್ಚು ಎಐಎಡಿಎಂಕೆ ಶಾಸಕರು ಪಕ್ಷದಿಂದ ಹೊರಬರುವ ಸಾಧ್ಯತೆಯಿದೆ. ಎಐಎಡಿಎಂಕೆ ಅತೃಪ್ತ ಶಾಸಕರ ನೇತೃತ್ವವನ್ನು ಹಿರಿಯ ನಾಯಕ ಸಿ.ವಿ.ಷಣ್ಮುಗಂ ವಹಿಸಿಕೊಂಡಿದ್ದು ಅವರ ನಿವಾಸದಲ್ಲಿ ಇಂದು ವಿಜಯ್ ಬೆಂಬಲಕ್ಕೆ ಮನಸ್ಸು ಮಾಡಿರುವ ಎಐಎಡಿಎಂಕೆ ಶಾಸಕರ ಸಭೆ ನಡೆಯಲಿದೆ ಎಂದು ಹೇಳಲಾಗಿದೆ.
ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಚುನಾವಣೆ ಗೆಲ್ಲುತ್ತಿದ್ದಂತೆ ರಾಜಕೀಯ ಸಮೀಕರಣಗಳು ವೇಗವಾಗಿ ಬದಲಾಗುತ್ತಿದ್ದು, ತಮಿಳುನಾಡಿನ ರಾಜಕೀಯ ಹೊಸ ತಿರುವು ಪಡೆಯುತ್ತಿದೆ.
ರಾಜ್ಯಪಾಲರ ಭೇಟಿ
ಟಿವಿಕೆ ಪಕ್ಷದ ಮುಖ್ಯಸ್ಥ ನಟ ವಿಜಯ್ ಇಂದು ತಮಿಳುನಾಡಿನ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಸಂಜೆ ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದು, ಇದಾದ ಬಳಿಕ ರಾಜ್ಯಪಾಲರು ಸರ್ಕಾರ ರಚನೆಗೆ ನಟ ವಿಜಯ್ ಅವರಿಗೆ ಅಧಿಕೃತ ಆಹ್ವಾನ ನೀಡುವರು. ಈ ಹಿನ್ನೆಲೆಯಲ್ಲಿ ನಾಳೆ ಇಲ್ಲವೇ ನಾಡಿದ್ದು ವಿಜಯ್ ಅವರ ಪಟ್ಟಾಭಿಷೇಕ ನಡೆಯಲಿದೆ. ಇದಕ್ಕೂ ಮೊದಲು ನಡೆದ ಟಿವಿಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಟ ವಿಜಯ್ ಅವರ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದಾದ ಬಳಿಕವೇ ನಟ ವಿಜಯ್ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಿದರು.
ಟಿವಿಕೆಗೆ ಕಾಂಗ್ರೆಸ್ ಬೆಂಬಲ
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯಭೇರಿ ಬಾರಿಸಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಖಿಗಿಏ) ಪಕ್ಷಕ್ಕೆ ಬೆಂಬಲ ನೀಡಲು ಕಾಂಗ್ರೆಸ್ ಅಧಿಕೃತವಾಗಿ ನಿರ್ಧರಿಸಿದೆ. ಆದರೆ, ಈ ಮೈತ್ರಿಗೆ ಕಾಂಗ್ರೆಸ್ ಷರತ್ತು ವಿಧಿಸಿದ್ದು, ಮೈತ್ರಿಕೂಟದಲ್ಲಿ ಯಾವುದೇ ’ಕೋಮುವಾದಿ ಶಕ್ತಿಗಳಿಗೆ’ ಅವಕಾಶ ನೀಡಬಾರದು ಎಂದು ಸ್ಪಷ್ಟಪಡಿಸಿದೆ.
ಚುನಾವಣೆಯಲ್ಲಿ ೧೦೮ ಸ್ಥಾನಗಳನ್ನು ಗೆದ್ದಿರುವ ವಿಜಯ್‌ಗೆ ಬಹುಮತಕ್ಕೆ (೧೧೮) ಇನ್ನು ಕೇವಲ ೧೦ ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್‌ನ ೫ ಶಾಸಕರ ಬೆಂಬಲ ಸಿಕ್ಕರೆ ಟಿವಿಕೆ ಬಲ ೧೧೨ಕ್ಕೇರಲಿದೆ. ಮ್ಯಾಜಿಕ್ ಸಂಖ್ಯೆ ತಲುಪಲು ಇನ್ನು ಕೇವಲ ೬ ಶಾಸಕರ ಬೆಂಬಲ ಬೇಕಾಗಿದ್ದು, ಇದಕ್ಕಾಗಿ ವಿಜಯ್ ಅವರು ವಿಸಿ ಕೆ (ಗಿಅಏ), ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಒಂದು ವೇಳೆ ಈ ಪಕ್ಷಗಳು ಕೈಜೋಡಿಸಿದರೆ ಒಟ್ಟು ಸಂಖ್ಯಾಬಲ ೧೧೯ಕ್ಕೆ ಏರಲಿದ್ದು, ಸುಭದ್ರ ಸರ್ಕಾರ ರಚನೆ ಸಾಧ್ಯವಾಗಲಿದೆ.
ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಕೋಮುವಾದಿ ಶಕ್ತಿಗಳನ್ನು ಮೈತ್ರಿಯಿಂದ ಹೊರಗಿಡಬೇಕು ಎನ್ನುವ ಷರತ್ತಿನ ಮೇಲೆ ನಾವು ಬೆಂಬಲ ನೀಡುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ಮತ್ತು ವಿಜಯ್ ಅವರು ತಮಿಳುನಾಡಿನಲ್ಲಿ ಜಾತ್ಯತೀತ ಮತ್ತು ಪ್ರಗತಿಪರ ಸರ್ಕಾರ ನೀಡಲು ಪರಸ್ಪರ ಕೈಜೋಡಿಸಿದ್ದಾರೆ.
ಮೂಲಗಳ ಪ್ರಕಾರ, ವಿಜಯ್ ಸಂಪುಟದಲ್ಲಿ ಕಾಂಗ್ರೆಸ್‌ಗೆ ಎರಡು ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆಯಿದೆ. ಈ ಮೈತ್ರಿಯು ಕೇವಲ ಸರ್ಕಾರ ರಚನೆಗೆ ಸೀಮಿತವಾಗದೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗಳಿಗೂ ಮುಂದುವರಿಯಲಿದೆ ಎಂದು ಹೇಳಲಾಗಿದೆ.

























