
ಸಂಜೆವಾಣಿ ನ್ಯೂಸ್
ಮೈಸೂರು: ಮೇ.07:- ಸಾರ್ವಜನಿಕವಾಗಿ ರಸ್ತೆ ಬದಿಯಲ್ಲೇ ಬಯಲು ಮೂತ್ರ ವಿಸರ್ಜಿಸಿ ಪರಿಸರ ಹಾಳು ಮಾಡುವವರಿಗೆ ಕಡಿವಾಣ ಹಾಕಲು ವಾಣಿ ವಿಲಾಸ ನೀರು ಸರಬರಾಜು ಮಂಡಳಿಯ ಒಳಚರಂಡಿ ವಿಭಾಗ ಕನ್ನಡಿ ಮಾದರಿಯ ಪಾಲಿಶ್ ಮಾಡಿರುವ ರಿಫ್ಲೆಕ್ಟಿವ್ ಸ್ಟೈನ್ಲೆಸ್ ಸ್ಟೀಲ್ ಶೀಟ್ನಲ್ಲಿ ತಡೆಗೋಡೆ ನಿರ್ಮಿಸುವ ಹೊಸ ಪ್ರಯೋಗ ಮಾಡಿದ್ದು, ಒಂದೇ ದಿನದಲ್ಲಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಪೀಪಲ್ಸ್ ಪಾರ್ಕ್ಗೆ ಹೊಂದಿಕೊಂಡಂತೆ ಹರಿಯುವ ಚರಂಡಿ ಭಾಗದಲ್ಲಿ ಪ್ರತಿದಿನ ನೂರಾರು ಮಂದಿ ಬಯಲು ಶೌಚಾಲಯ, ಮೂತ್ರ ವಿಸರ್ಜಿಸಿ, ಬಿ.ಎನ್.ರಸ್ತೆಯಲ್ಲಿ ಸಂಚರಿಸುವವರು ಮುಜುಗರಕ್ಕೀಡಾಗುವಂತೆ ಮಾಡುತ್ತಿದ್ದರು. ಪಕ್ಕದಲ್ಲಿಯೇ ಸಾರ್ವಜನಿಕ ಶೌಚಾಲಯವಿದ್ದರೂ, ಜನರು ಮಾತ್ರ ಬಯಲಿನಲ್ಲಿಯೇ ಮೂತ್ರ ವಿಸರ್ಜಿಸುತ್ತಿದ್ದರು. ಇದರಿಂದ ದುರ್ವಾಸನೆ ಬೀರುತ್ತಾ, ಆ ಭಾಗದಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿತ್ತು.
ದಂಡದ ಬೋರ್ಡಿಗೂ ಕ್ಯಾರೆ ಎನ್ನದ ಜನ: ಸ್ವಚ್ಛ ಸವೇಕ್ಷಣೆಯಲ್ಲಿ ಗ್ರಾಮಾಂತರ ಬಸ್ ನಿಲ್ದಾಣದ ಎದುರು ಬಿ.ಎನ್.ರಸ್ತೆ ಬದಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದರಿಂದ ಆ ಸ್ಥಳವನ್ನು ಹಳದಿ ವಲಯ ಎಂದು ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಬಯಲಲ್ಲಿ ಮೂತ್ರ ವಿಸರ್ಜಿಸಿದರೆ ದಂಡಾಸ್ತ್ರ ಪ್ರಯೋಗಿಸುವುದಾಗಿ ಎಚ್ಚರಿಕೆ ಸಂದೇಶದ ಬ್ಯಾನರ್ ಹಾಗು ಬೋರ್ಡ್ ಅಳವಡಿಸಲಾಗಿತ್ತು. ಆದರೂ, ಜನ ಅದಕ್ಕೆ ಸೊಪ್ಪು ಹಾಕದೆ ಬಯಲಿನಲ್ಲಿಯೇ ಮೂತ್ರ ವಿಸರ್ಜಿಸಿ ವಾತಾವರಣ ಕಲುಷಿತಗೊಳ್ಳುವಂತೆ ಮಾಡುತ್ತಿದ್ದರು.
ಹೊಸ ಪ್ರಯೋಗ: ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ರಾಜ್ಯದ ವಿವಿಧ ಜಿಲ್ಲೆ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಬರುವ ಪ್ರಯಾಣಿಕರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿ.ಎನ್.ರಸ್ತೆಯಲ್ಲಿ ಬಯಲು ಮೂತ್ರ ವಿಸರ್ಜನೆ ಪ್ರವಾಸಿಗರು ತಲೆ ತಗ್ಗಿಸುವಂತೆ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಬಯಲು ಮೂತ್ರ ವಿಸರ್ಜನೆ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಲು ಚಿಂತಿಸುತ್ತಿದ್ದ ಮೈಸೂರು ಮಹಾನಗರ ಪಾಲಿಕೆ, ವಾಣಿ ವಿಲಾಸ ನೀರು ಸರಬರಾಜು ಮಂಡಳಿ(ಒಳಚರಂಡಿ ವಿಭಾಗ) ಮೂಲಕ ಹೊಸ ಪ್ರಯೋಗ ಮಾಡಿದೆ.
ಗ್ರಾಮಾಂತರ ಬಸ್ ನಿಲ್ದಾಣದ ಬಳಿಯಿರುವ ಆರ್ಚ್ ಸಮೀಪದಿಂದ ಹಾರ್ಡಿಂಗ್ ವೃತ್ತದ ಕಡೆಗೆ ಪೀಪಲ್ಸ್ ಪಾರ್ಕ್ ಪಕ್ಕದಲ್ಲಿ ಹಾದುಹೋಗಿರುವ ದೊಡ್ಡ ಚರಂಡಿ ಪಕ್ಕ 85 ಮೀಟರ್ ವಿಸ್ತೀರ್ಣದಲ್ಲಿ ಪಾಲಿಶ್ ಮಾಡಿರುವ ರಿಫ್ಲೆಕ್ಟಿವ್ ಸ್ಟೈನ್ಲೆಸ್ ಸ್ಟೀಲ್ ಶೀಟ್ಗಳನ್ನು ತಡೆಗೋಡೆ ಮಾದರಿಯಲ್ಲಿ ಅಳವಡಿಸಲಾಗಿದೆ. ಕನ್ನಡಿಯಂತೆ ಕಾಣುವ ಈ ರಿಫ್ಲೆಕ್ಟಿಟ್ ಸ್ಟೈನ್ಲೆಸ್ ಸ್ಟೀಲ್ ಶೀಟ್ ಮುಂದೆ ಇರುವವರ ಮುಖ ಚಹರೆ ಸ್ಪಷ್ಟವಾಗಿ ಕಾಣಿಸುತ್ತದೆ. ಅಲ್ಲದೆ, ಬಿ.ಎನ್.ರಸ್ತೆಯಲ್ಲಿ ಓಡಾಡುವವರು ಹಾಗೂ ವಾಹನದ ಬಿಂಬವೂ ಕಾಣಿಸುವುದರಿಂದ ಮೂತ್ರ ವಿಸರ್ಜನೆ ಮಾಡಲು ಬರುವವರಿಗೆ ಮುಖಕ್ಕೆ ಹೊಡೆದಂತೆ ಭಾಸವಾಗಲಿದೆ. ಇದರಿಂದ ಅವರು ಬಯಲು ಮೂತ್ರ ವಿಸರ್ಜನೆ ಮುಂದಾಗದೆ ವಾಪಸ್ ಹೋಗಲಿದ್ದಾರೆ.






















