
ಸಂಜೆವಾಣಿ ವಾರ್ತೆ
ಹೊಸಪೇಟೆ. ಮೇ,14- ನಿಸ್ವಾರ್ಥ ಸೇವೆಯ ಮೂಲಕ ರೆಡ್ ಕ್ರಾಸ್ ಸಂಸ್ಥೆ ಜಗತ್ತಿನಾದ್ಯಂತ ಮಾನವೀಯ ಸಂದೇಶ ಸಾರುತ್ತಿರುವ ಏಕೈಕ ಸಂಸ್ಥೆಯಾಗಿದೆ ಎಂದು ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಮನಿ ಹೇಳಿದರು.
ತಾಲೂಕಿನ ಕಮಲಾಪುರದ ಹಂಪಿ ಶ್ರೀವಿರೂಪಾಕ್ಷೇಶ್ವರ ಪದವಿ ಕಾಲೇಜಿನಲ್ಲಿ ಬುಧವಾರ ವಿಶ್ವ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ರೆಡ್ ಕ್ರಾಸ್ ಕೇವಲ ರಕ್ತದಾನಕ್ಕೆ ಸೀಮಿತವಾದ ಸಂಸ್ಥೆಯಲ್ಲ. 18ನೇ ಶತಮಾನದಿಂದಲೂ ನಿಸ್ವಾರ್ಥ ಸೇವೆಯ ಮೂಲಕ ಜಗತ್ತಿನಾದ್ಯಂತ ಮಾನವೀಯತೆಯ ಸಂದೇಶ ಸಾರುತ್ತಿದೆ. ಪ್ರವಾಹ, ಭೂಕಂಪ, ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳ ವೇಳೆ ತಕ್ಷಣದ ನೆರವು, ವೈದ್ಯಕೀಯ ಚಿಕಿತ್ಸೆ, ಆಂಬ್ಯುಲೆನ್ಸ್ ಹಾಗೂ ಔಷಧಗಳ ವ್ಯವಸ್ಥೆಯಲ್ಲಿ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ’ ಎಂದರು.
‘21ನೇ ಶತಮಾನದಲ್ಲಿ ಮನುಷ್ಯತ್ವ ಮತ್ತು ಅಂತಃಕರಣದ ಮೌಲ್ಯಗಳು ಕ್ಷೀಣಿಸುತ್ತಿವೆ. ಯಾಂತ್ರಿಕ ಜೀವನದ ನಡುವೆ ರೆಡ್ ಕ್ರಾಸ್ ಸಂಸ್ಥೆಯ ನಿಸ್ವಾರ್ಥ ಸೇವೆ ನಮಗೆ ಮಾದರಿಯಾಗಬೇಕು. ಕೇವಲ ಪದವಿ ಪಡೆಯುವುದು ಶಿಕ್ಷಣದ ಗುರಿಯಾಗಬಾರದು. ಅನುದಾನಿತ ಕಾಲೇಜುಗಳ ಉನ್ನತ ವಿದ್ಯಾರ್ಹತೆಯ ಶಿಕ್ಷಕರು ಬದುಕಿನ ಪಾಠ ಕಲಿಸುತ್ತಾರೆ. ಇಲ್ಲಿ ಕಲಿತ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಬೇಕು’ ಎಂದು ಕಿವಿಮಾತು ಹೇಳಿದರು.
ಕಮಲಾಪುರ ಪ್ರಾಥಮಿಕ ಅರೋಗ್ಯ ಕೇಂದ್ರದ ಡಾ.ಸ್ವಪ್ನಾ ಕಟ್ಟಿ ಮಾತನಾಡಿ, ರಕ್ತದಾನದಿಂದ ಮನುಷ್ಯ ದೇವನಾಗಬಲ್ಲ, ಒಬ್ಬರ ರಕ್ತ ನಾಲ್ಕು ಜೀವಗಳನ್ನು ಉಳಿಸುತ್ತೆ, ಜೀವ ಉಳಿಸುವುದು ದೇವರಿಂದ ಮಾತ್ರ ಸಾಧ್ಯ. ಆ ದೇವರ ಸ್ಥಾನವನ್ನು ರಕ್ತದಾನಿ ಪಡೆಯಬಲ್ಲ, ಆರೋಗ್ಯವಂತರು ಕನಿಷ್ಠ 60 ವರ್ಷದ ಜೀವಿತಾವಧಿಯಲ್ಲಿ 200 ಬಾರಿ ರಕ್ತದಾನ ಮಾಡಬಹುದು, ಇದರಿಂದಾಗಿ ರೋಗಿಯದಷ್ಟೆ ಅಲ್ಲ ರಕ್ತದಾನಿಯ ಆರೋಗ್ಯವು ಅತ್ಯುತ್ತಮವಾಗಿ ಸುಧಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಿ ಅರೋಗ್ಯವಂತರಾಗಿ ಎಂದು ಕರೆ ನೀಡಿದರು.
ರೆಡ್ ಕ್ರಾಸ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಖಾ ಪ್ರಕಾಶ್, ಎಂಸಿ ಸದಸ್ಯೆ ಅನ್ನಪೂರ್ಣ ಸದಾಶಿವ, ಕಾಲೇಜಿನ ಪ್ರಾಚಾರ್ಯ ಬಸವರಾಜ್ ಎಮ್ಮಿಗನೂರು, ಸಾಹಿತಿ ಸೋ.ದಾ. ವಿರುಪಾಕ್ಷಗೌಡ, ಕಾಲೇಜಿನ ಎನ್.ಎಸ್.ಎಸ್. ಘಟಕದ ಮುಖ್ಯಸ್ಥರಾದ ಕೆ. ವೀಣಾ, ಉಪನ್ಯಾಸಕಿ ಡಾ.ಉಮಾ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕಲಾವಿದ ಮುದೇನೂರು ಉಮಾಮಹೇಶ್ವರ ಆರೋಗ್ಯ ಗೀತೆ ಹಾಡಿದರು. ವೆಂಕಟೇಶ್ ಬಡಿಗೇರ್ ಸ್ವಾಗತಿಸಿದರು. ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕÀ ಡಾ.ಸುರೇಂದ್ರ ಮಾನೇಮಿ ಪ್ರಾಸ್ತಾವಿP ಮಾತುಗಳನ್ನಾಡಿದರು. ಡಾ.ನಟರಾಜ್ ನಿರೂಪಿಸಿ ವಂದಿಸಿದರು.























