Home ಜಿಲ್ಲೆ ಕೆಪಿಎಸ್ ಶಾಲೆಗೆ ಮಕ್ಕಳನ್ನು ಸೇರಿಸಲು ಸಿದ್ದಲಿಂಗಪ್ಪ ಚೌಕಿ ಪೋಷಕರ ವಿರೋಧ

ಕೆಪಿಎಸ್ ಶಾಲೆಗೆ ಮಕ್ಕಳನ್ನು ಸೇರಿಸಲು ಸಿದ್ದಲಿಂಗಪ್ಪ ಚೌಕಿ ಪೋಷಕರ ವಿರೋಧ

ಸಂಜೆವಾಣಿ ವಾರ್ತೆ

ಹೊಸಪೇಟೆ.ಮೇ.14 ಸ್ಥಳೀಯ 9ನೇ ವಾರ್ಡಿನ ಸಿದ್ದಲಿಂಗಪ್ಪ ಚೌಕಿಯ ಪಾಲಕರು/ಪೋಷಕರು ತಮ್ಮ ಮಕ್ಕಳನ್ನು ಕೆಪಿಎಸ್ ಶಾಲೆಗೆ ಸೇರಿಸಲು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದ 9ನೇ ವಾರ್ಡಿನ ಸಿದ್ದಲಿಂಗಪ್ಪ ಚೌಕಿಯ ಶಾರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ  ಶಾಲೆ ಮುಂದೆ  ‘ನಮ್ಮೂರ ಶಾಲೆ ನಮ್ಮೂರಲ್ಲಿ ಉಳಿಸಿ’ ಎಂದು ಬ್ಯಾನರ್ ಕಟ್ಟಿ ಶಾಲಾಭಿವೃದ್ದಿ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಬುಧವಾರ  ಪ್ರತಿಭಟನೆ ನಡೆಸಿದರು.

ಪಾಲಕರ ಹಾಗೂ ಪೋಷಕರ ಹೋರಾಟ ಬೆಂಬಲಿಸಿ ಮಾತನಾಡಿದ ಎಐಡಿಸ್ಓ ಜಿಲ್ಲಾ ಕಾರ್ಯದರ್ಶಿ ಯು. ಉಮಾದೇವಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ಇಡೀ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪೋಷಕರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ಆರಂಭಿಸಿ, ಬಡವರ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಸದರಿ ಶಾರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1970 ಕ್ಕಿಂತ ಮೊದಲು ಸಿದ್ದಲಿಂಗಪ್ಪ ಚೌಕಿಯ ಮೂರನೇ ಕ್ರಾಸಿನಲ್ಲಿ ಒಂದು ಗುಡಿಸಲಿನಲ್ಲಿ ಇತ್ತು, ನಂತರ ಅದನ್ನು ಈಗ ಇರುವ ಭಜನಾಮಂದಿರಕ್ಕೆ ಸ್ಥಳಾಂತರ ಮಾಡಲಾಯಿತು. ನಂತರ ಈ ಭಾಗದ ಮುಖಂಡರು ಸೇರಿ ಈಗ ಇರುವ ಶಾಲೆಯನ್ನು ತೆರೆದರು. ಸಿದ್ದಲಿಂಗಪ್ಪ ಚೌಕಿಯ ಮಾಲೀಕರು ಈ ಶಾಲೆಗೆ ಜಾಗವನ್ನು ದಾನ ಮಾಡಿದ್ದರು. ಒಂದು ಗುಡಿಸಿಲಿನಲ್ಲಿ ಪ್ರಾರಂಭವಾದ ಶಾಲೆ, ಈಗ ಈ ಮಟ್ಟಕ್ಕೆ ಬೆಳೆದಿದೆ, ಅದಕ್ಕೆ ಆ ಶಾಲೆಯ ಶಿಕ್ಷಕರು ಮತ್ತು ಚೌಕಿಯ ಜನರೇ ಕಾರಣರಾಗಿದ್ದಾರೆ.

ನಮ್ಮ ಓಣಿಯಲ್ಲಿ ಸರ್ಕಾರಿ ಶಾಲೆ ಇರಬೇಕು ಎಂದು ಹಿಂದಿನ ಕಾಲದ ಜನ ಶ್ರಮಪಟ್ಟು ಕಟ್ಟಿಸಿರುವ ಈ ಶಾಲೆಯನ್ನು, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಲ್ಲಿ ಮುಚ್ಚುತ್ತಿರುವುದು ಜನವಿರೋಧಿ ನೀತಿಯಾಗಿದೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್ಡಿಎಂಸಿ ಸದಸ್ಯರಾದ ಉಮಾ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯರಾದ ರತ್ನಮ್ಮ, ತನು, ಬಾಬು ಸಾಬ್ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು, ಪೋಷಕರು ಇದ್ದರು.