
ತುಮಕೂರು, ಸೆ. ೪- ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರತಿ ತಿಂಗಳು ಎಲ್ಲಾ ಶನಿವಾರಗಳಂದು ಪ್ರಜಾಸೇವೆ ಆಂದೋಲನ ಸಭೆಗಳನ್ನು ಆಯೋಜಿಸಲು ಸರ್ಕಾರ ನಿರ್ಧರಿಸಿದ್ದು, ಸೆ. ೫ ರಿಂದ ಅಭಿಯಾನಕ್ಕೆ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿ ಗುಬ್ಬಿ ಪಟ್ಟಣದ ಡಾ. ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಸೆ. ೫ ರಂದು ಬೆಳಿಗ್ಗೆ ೧೦ ಗಂಟೆಗೆ ಪ್ರಜಾಸೇವಾ ಆಂದೋಲನ ಸಭೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಅದೇ ದಿನ ಜಿಲ್ಲೆಯ ಉಳಿದ ೯ ತಾಲ್ಲೂಕುಗಳಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಯಲಿದ್ದು, ಸೆ. ೧೨ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಯಲಿದೆ.
ಜಿಲ್ಲೆಯ ಸಾರ್ವಜನಿಕರು ಅಹವಾಲುಗಳೇನಾದರೂ ಇದ್ದಲ್ಲಿ ಸೆಪ್ಟೆಂಬರ್ ೫ ಹಾಗೂ ೧೨ ರಂದು ನಡೆಯುವ ಪ್ರಜಾಸೇವೆ ಆಂದೋಲನ ಸಭೆಗೆ ಖುದ್ದಾಗಿ ಹಾಜರಾಗಿ ಅಹವಾಲು ಸಲ್ಲಿಸಬಹುದಾಗಿದೆ. ಅಲ್ಲದೆ ಸಭಾ ಸ್ಥಳಗಳಲ್ಲಿ ತೆರೆಯಲಾಗುವ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕ ನಾಗರಿಕರು ತಮ್ಮ ಅಹವಾಲು / ದೂರುಗಳನ್ನು ಸಲ್ಲಿಸಿ ಪರಿಹಾರ ಕಂಡು ಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ಆಂದೋಲನದ ಸದುಪಯೋಗ ಪಡೆದುಕೊಳ್ಳಲು ಅವರು ಮನವಿ ಮಾಡಿದ್ದಾರೆ.
ಪ್ರಜಾಸೇವೆ ಆಂದೋಲನ ಸಭೆಯನ್ನು ಸೆ. ೫ ರಂದು ತುಮಕೂರು ಉಪವಿಭಾಗ ವ್ಯಾಪ್ತಿ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ಅಂಬೇಡ್ಕರ್ ಭವನದಲ್ಲಿ, ಕುಣಿಗಲ್ ತಾಲ್ಲೂಕು ಹುತ್ರಿದುರ್ಗ ಹೋಬಳಿ ಸಂತೇಪೇಟೆ ಗ್ರಾಮ ಪಂಚಾಯ್ತಿ ಪಕ್ಕದ ಆವರಣ, ಗುಬ್ಬಿ ಪಟ್ಟಣ ಡಾ. ಗುಬ್ಬಿ ವೀರಣ್ಣ ರಂಗಮಂದಿರ; ಮಧುಗಿರಿ ಉಪವಿಭಾಗ ವ್ಯಾಪ್ತಿ ಮಧುಗಿರಿ ತಾಲ್ಲೂಕು ಕಚೇರಿ ಆವರಣ, ಸಿರಾ ತಾಲ್ಲೂಕು ಗೌಡಗೆರೆ ಗ್ರಾಮ ಪಂಚಾಯ್ತಿ ಆವರಣ, ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಸಮುದಾಯ ಭವನ, ಪಾವಗಡ ತಾಲ್ಲೂಕು ವೈ.ಎನ್. ಹೊಸಕೋಟೆ ಗ್ರಾಮ ಪಂಚಾಯ್ತಿ ಆವರಣ; ತಿಪಟೂರು ಉಪವಿಭಾಗ ತಿಪಟೂರು ತಾಲ್ಲೂಕು ಹೊನ್ನವಳ್ಳಿ ಹೋಬಳಿ ಹುಡಿಸಲಮ್ಮ ದೇವಸ್ಥಾನ ಆವರಣ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಂದಿಕೆರೆ ಗ್ರಾಮ ಪಂಚಾಯ್ತಿ ಆವರಣ ಹಾಗೂ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿಯ ರಂಗಮಂದಿರ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಸೆ. ೧೨ ರಂದು ತುಮಕೂರು ಉಪವಿಭಾಗ ವ್ಯಾಪ್ತಿ ತುಮಕೂರು ತಾಲ್ಲೂಕು ಬೆಳ್ಳಾವಿ ಗ್ರಾಮ ಪಂಚಾಯ್ತಿ ಆವರಣ, ಕುಣಿಗಲ್ ತಾಲ್ಲೂಕು ಎಡೆಯೂರು ಗ್ರಾಮ ಪಂಚಾಯ್ತಿ ಆವರಣ, ಗುಬ್ಬಿ ತಾಲ್ಲೂಕು ಚೇಳೂರು ನಾಡಕಚೇರಿ ಆವರಣ, ಮಧುಗಿರಿ ಉಪವಿಭಾಗ ವ್ಯಾಪ್ತಿ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಬಾಬು ಜಗಜೀವನ್ ರಾಂ ಸಮುದಾಯ ಭವನ, ಸಿರಾ ತಾಲ್ಲೂಕು ಹುಲಿಕುಂಟೆ ನಾಡ ಕಚೇರಿ ಆವರಣ, ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ಗ್ರಾಮ ಪಂಚಾಯ್ತಿ ಆವರಣ, ಪಾವಗಡ ತಾಲ್ಲೂಕು ನಾಗಲಮಡಿಕೆ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಸಮುದಾಯ ಭವನ ಆವರಣ; ತಿಪಟೂರು ಉಪವಿಭಾಗ ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿ ಎಪಿಎಂಸಿ ಕಚೇರಿ ಆವರಣ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆ ನಾಡ ಕಚೇರಿ ಆವರಣ ಹಾಗೂ ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟ ಹೋಬಳಿಯ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.






























