
ಜಮಖಂಡಿ ಮೇ 1:ತಾಲೂಕು ಆಡಳಿತ ಸೌಧದ ತಹಶಿಲ್ದಾರ ಸಭಾ ಭವನದಲ್ಲಿ ಶ್ರೀ ಗೌತಮ ಬುದ್ಧರ ಜಯಂತಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗಣ್ಯರು ಬುದ್ಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಯಮನಪ್ಪ ಗುಣದಾಳ, ಬುದ್ಧರ ಶಾಂತಿ, ಕರುಣೆ ಮತ್ತು ಸಮಾನತೆಯ ಸಂದೇಶಗಳು ಇಂದಿಗೂ ಜಗತ್ತಿನಾದ್ಯಂತ ಮಹತ್ವ ಪಡೆದಿವೆ ಎಂದು ಹೇಳಿದರು. ಬುದ್ಧರ ತತ್ವಗಳು ಕೇವಲ ಆಚರಣೆಗೆ ಸೀಮಿತವಾಗದೇ, ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅವರು ಒತ್ತಿ ಹೇಳಿದರು.
ನ್ಯಾಯವಾದಿ ಶರನಕುಮಾರ ಕಂಬಾಗಿ ಮಾತನಾಡಿ, ಬುದ್ಧರು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದು, ಅವರ ಸಂದೇಶಗಳು ಜಗತ್ತಿನಲ್ಲಿ ಶಾಂತಿ ನೆಲೆಸಲು ಕಾರಣವಾಗಿವೆ ಎಂದರು.
ಪರಶುರಾಮ ಕಾಂಬಳೆ ಮಾತನಾಡಿ, ಸಮಾಜದಲ್ಲಿ ಶಾಂತಿ ಮತ್ತು ಸಮಾನತೆ ಸ್ಥಾಪನೆಗೆ ಬುದ್ಧರ ಚಿಂತನೆಗಳನ್ನು ಅನುಸರಿಸುವುದು ಅವಶ್ಯಕ ಎಂದು ಹೇಳಿದರು.
ರಮೇಶ್ ಬಳೂಲಗಿಡದ ಮಾತನಾಡಿ, ಬುದ್ಧರು ಜಾತಿ ರಹಿತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಐಶಾರಾಮಿ ಜೀವನವನ್ನೇ ತ್ಯಜಿಸಿ ವಿಶ್ವಕ್ಕೆ ಆದರ್ಶವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶಿಲ್ದಾರ ಅನೀಲ ಬಡಗೇರ ಮಾತನಾಡಿ, ಬುದ್ಧರ ಸಂದೇಶಗಳು ಕೇವಲ ಭಾರತಕ್ಕೆ ಸೀಮಿತವಾಗದೇ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.





















