
ಯಾದಗಿರಿ: ಮಾ.೨೨:ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಗಳು ಇನ್ನಷ್ಟು ಬಲಪಡಬೇಕಾದ ಅಗತ್ಯವಿದ್ದು, ಸಂಘಟಿತ ಚಳುವಳಿಯ ಮೂಲಕವೇ ಸಮಾಜದಲ್ಲಿ ಶಾಶ್ವತ ಪರಿವರ್ತನೆ ಸಾಧ್ಯವೆಂದು ಮಾದಿಗ ದಂಡೋರ ಹೋರಾಟ ಸಮಿತಿ (ಎಂಆರ್‌ಪಿಎಸ್) ರಾಜ್ಯ ಉಪಾಧ್ಯಕ್ಷ ಗಣೇಶ್ ದುಪ್ಪಲ್ಲಿ ಅಭಿಪ್ರಾಯಪಟ್ಟರು.
ನಗರದ ಹಳೆ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊರುಂಚಾ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ನೇಮಕಾತಿ ಆದೇಶ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸಮಾಜದ ಕಟ್ಟಕಡೆಯ ವ್ಯಕ್ತಿಯಿಗೂ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲಬಾರದು. ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತನು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ, ಬಡ ಮತ್ತು ಹಿಂದುಳಿದ ವರ್ಗಗಳ ಬದುಕಿಗೆ ಬೆಳಕು ನೀಡುವ ಕೆಲಸ ಮಾಡಬೇಕು” ಎಂದು ಅವರು ಕರೆ ನೀಡಿದರು.
ಜಿಲ್ಲಾಧ್ಯಕ್ಷ ಕಾಶಪ್ಪ ಮಾದಿಗ ಹೆಗ್ಗಣಗೇರಾ ಮಾತನಾಡಿ, ಎಂಆರ್‌ಪಿಎಸ್ ಸಂಘಟನೆ ಸಾಮಾಜಿಕ ನ್ಯಾಯದ ಸಂಕಲ್ಪದೊAದಿಗೆ ಕೆಲಸ ಮಾಡುತ್ತಿದ್ದು, ಹೊಸ ಪದಾಧಿಕಾರಿಗಳು ಸಂಘಟನೆಯ ತತ್ವಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಅವರ ಮಾರ್ಗದರ್ಶನದಲ್ಲಿ ಸಂಘಟನೆ ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮುಂಡರಗಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಹೊರುಂಚಾ ಗ್ರಾಮ ಘಟಕದ ಗೌರವಾಧ್ಯಕ್ಷರಾಗಿ ಶಶಿಕುಮಾರ್ ತೊದಲೋರು ನೇಮಕಗೊಂಡಿದ್ದಾರೆ. ಅಧ್ಯಕ್ಷರಾಗಿ ಸಲ್ಮಾನ್ ಡೋಳೇನೂರ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ತಿಪ್ಪಣ್ಣ ತೊದಲೂರು ಮತ್ತು ವಿಜಯಕುಮಾರ್ ಡೊಳ್ಳನೂರ್ ಕಾರ್ಯನಿರ್ವಹಿಸಲಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಆನಂದ್ ಡೊಳ್ಳನೂರ್, ಕಾರ್ಯಾಧ್ಯಕ್ಷರಾಗಿ ಮಲ್ಲಿಕಾರ್ಜುನ್ ಶೆಟ್ಟಿಗೇರಾ, ಸಹ ಕಾರ್ಯದರ್ಶಿಯಾಗಿ ಸುನಿಲ್ ಬಡಿಗೇರ್ ಹಾಗೂ ಖಜಾಂಚಿಯಾಗಿ ಶಿವಶರಣ ಬಡಿಗೇರ್ ನೇಮಕಗೊಂಡಿದ್ದಾರೆ.
ಇನ್ನು ಕಾರ್ಯಕಾರಿಣಿ ಸದಸ್ಯರಾಗಿ ಸಿಮೆನ್ ಹೊಸಳ್ಳಿ, ಮರಲಿಂಗಪ್ಪ, ಭೀಮರಾಯ ಮತ್ತು ಡೊಳ್ಳುನೂರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ದುರ್ಗಪ್ಪ, ಮರಲಿಂಗ ಹಾಗೂ ಶಾಮ್ ಮುಂಡರಗಿ ಸೇರಿದಂತೆ ಅನೇಕರು ಹಾಜರಿದ್ದು, ನೂತನ ತಂಡಕ್ಕೆ ಶುಭಾಶಯ ಕೋರಿದರು.






















