
ನವದೆಹಲಿ, ನ.೭- ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಇ.೨೦ ಎಥೆನಾಲ್ ನೀತಿ ಈಗ ೪೨೦ ಆಗಿದೆ ಎಂದು ಕಿಡಿಕಾರಿದ್ದಾರೆ.
ಪೆಟ್ರೋಲ್ನಲ್ಲಿ ಶೇ.೨೦ರಷ್ಟು ಎಥೆನಾಲ್ ಮಿಶ್ರಣ ಮಾಡುವ ಕೇಂದ್ರ ಸರ್ಕಾರದ ಎಥೆನಾಲ್ನೀತಿ ಇದೀಗ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.
ಜನರು ದುಬಾರಿ ಬೆಲೆ ಕೊಟ್ಟು ಪೆಟ್ರೋಲ್ ಖರೀದಿಸುತ್ತಿದ್ದರೂ, ಅವರ ವಾಹನಗಳ ಟ್ಯಾಂಕ್ಗೆ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ತುಂಬಿಸಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ನಷ್ಟವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿವಾದದ ಕುರಿತು ಪೋಸ್ಟ್ ಮಾಡಿದ್ದು, ಕರ್ನಾಟಕದ ಏಳು ಜಿಲ್ಲೆಗಳಿಂದ ಸಂಗ್ರಹಿಸಿದ ೧೪ ಪೆಟ್ರೋಲ್ ಮಾದರಿಗಳಲ್ಲಿ ೧೧ ಮಾದರಿಗಳಲ್ಲಿ ಶೇ.೨೦ಕ್ಕಿಂತ ಹೆಚ್ಚು ಎಥೆನಾಲ್ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ದುಬಾರಿ ಬೆಲೆಗೆ ಪೆಟ್ರೋಲ್ ಖರೀದಿಸುವ ಗ್ರಾಹಕರಿಗೆ ನಷ್ಟವಾಗುತ್ತಿದೆ. ಹೆಚ್ಚಿನ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಕಡಿಮೆಯಾಗಬಹುದು ಹಾಗೂ ಪದೇಪದೇ ವಾಹನಗಳನ್ನು ರಿಪೇರಿ ಮಾಡಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.























