Home ಜಿಲ್ಲೆ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಹೊಸ ಚೈತನ್ಯ : ಅಂತಿಮ ಡಾಂಬರಿಕರಣಕ್ಕೆ ಚಾಲನೆ

ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಹೊಸ ಚೈತನ್ಯ : ಅಂತಿಮ ಡಾಂಬರಿಕರಣಕ್ಕೆ ಚಾಲನೆ

ಯಾದಗಿರಿ: ಮಾ.೨:ಬಹುಕಾಲದಿಂದ ನಿರೀಕ್ಷಿತವಾಗಿದ್ದ ರಾಜ್ಯ ಹೆದ್ದಾರಿ ಸುಧಾರಣಾ ಕಾಮಗಾರಿಗೆ ಮತ್ತೊಂದು ಮಹತ್ವದ ಹಂತ ಸೇರ್ಪಡೆಯಾಗಿ, ಫೈನಲ್ ಕೋಟ್ ಡಾಂಬರಿಕರಣ ಕಾರ್ಯಕ್ಕೆ ಅಧಿಕೃತ ಚಾಲನೆ ದೊರೆತಿದೆ. ಸುಮಾರು ೧೦ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಈ ಯೋಜನೆ ನಗರ ಸಂಚಾರ ವ್ಯವಸ್ಥೆಗೆ ದೀರ್ಘಕಾಲಿಕ ಪರಿಹಾರ ನೀಡುವ ನಿರೀಕ್ಷೆ ಮೂಡಿಸಿದೆ.

ಹಳೆಯ ಬಸ್ ನಿಲ್ದಾಣದಿಂದ ವಡಗೇರಾ ಕ್ರಾಸ್ ವರೆಗೆ ರಸ್ತೆ ತೀವ್ರವಾಗಿ ಹದಗೆಟ್ಟು, ಗುಂಡಿಗಳು ಹಾಗೂ ಅಸಮತೋಲನದಿಂದ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದರು. ವಿಶೇಷವಾಗಿ ಮಳೆಗಾಲದಲ್ಲಿ ಅಪಘಾತಗಳ ಭೀತಿ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಸಮಸ್ಯೆಯನ್ನು ಸಾರ್ವಜನಿಕವಾಗಿ ಎತ್ತಿಹಿಡಿದು, ತ್ವರಿತ ಕ್ರಮಕ್ಕೆ ಒತ್ತಾಯಿಸಿದ್ದರು.

ಇದೀಗ ರೈಲ್ವೆ ಬ್ರಿಡ್ಜ್ ಮೇಲ್ಭಾಗದಿಂದ ಆರಂಭವಾಗಿ ಪ್ರಮುಖ ಭಾಗಗಳಲ್ಲಿ ಅಂತಿಮ ಡಾಂಬರಿಕರಣ ಕಾರ್ಯ ನಡೆಯುತ್ತಿದೆ. ರಸ್ತೆ ಸಮತೋಲನಗೊಳಿಸಿ, ಗುಣಮಟ್ಟದ ಡಾಂಬರಿಕರಣದ ಮೂಲಕ ದೀರ್ಘಾಯುಷ್ಯ ನೀಡುವಂತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಉಮೇಶ್ ಕೆ. ಮುದ್ನಾಳ್ ಮಾತನಾಡಿ, “ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೊಂಡ ಹೋರಾಟಕ್ಕೆ ಸ್ಪಂದಿಸಿ ಕಾಮಗಾರಿ ಪ್ರಾರಂಭಿಸಿರುವುದು ಸ್ವಾಗತಾರ್ಹ. ಆದರೆ ರಸ್ತೆ ಪೂರ್ಣಗೊಂಡ ನಂತರ ತಡೆಗೋಡೆ ನಿರ್ಮಾಣ, ಸ್ಪಷ್ಟ ಸೂಚಕ ಫಲಕಗಳ ಅಳವಡಿಕೆ, ಝೀಬ್ರಾ ಕ್ರಾಸ್ ಗುರುತುಗಳು ಹಾಗೂ ರಸ್ತೆ ವಿಭಜಕಗಳನ್ನು ತುರ್ತಾಗಿ ಅಳವಡಿಸಬೇಕು. ಸುರಕ್ಷತಾ ಕ್ರಮಗಳಿಲ್ಲದೆ ಅಭಿವೃದ್ಧಿ ಅಪೂರ್ಣವಾಗುತ್ತದೆ” ಎಂದು ಹೇಳಿದರು.

ರಸ್ತೆ ಅಭಿವೃದ್ಧಿಯಿಂದ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ಸುಗಮವಾಗಲಿದ್ದು, ವ್ಯಾಪಾರ-ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಕಾಮಗಾರಿಯನ್ನು ಸ್ವಾಗತಿಸಿ, ಗುಣಮಟ್ಟ ಕಾಪಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.