
ಸಿಬಿಐ ತನಿಖೆಗೆ ಕೇಂದ್ರ ಆದೇಶ
ನವದೆಹಲಿ.ಮೇ೧೨: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಳೆದ ಮೇ ೩ ರಂದು ನಡೆಸಲಾಗಿದ್ದ ನೀಟ್ -ಯುಜಿ ೨೦೨೬ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಮರು ಪರೀಕ್ಷೆ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ( ಎನ್‌ಟಿಎ) ಹೇಳಿದೆ.
ನೀಟ್ ಮರು ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಹಾಗೂ ಪರೀಕ್ಷಾ ಅಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಸುವುದಾಗಿ ಎನ್ ಟಿಎ ಹೇಳಿದೆ.
ಮೇ ೩ರಂದು ನಡೆದಿದ್ದ ಪರೀಕ್ಷೆಯಲ್ಲಿ ರಾಜಸ್ಥಾನದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಕರಣದ ಸಂಪೂರ್ಣ ತನಿಖೆಯನ್ನು ಕೇಂದ್ರ ಸರ್ಕಾರ ಸಿಬಿಐಗೆ ಒಪ್ಪಿಸಿದೆ.
ಪರೀಕ್ಷೆಯ ಪಾವಿತ್ರ್ಯ ಮತ್ತು ಪಾರದರ್ಶಕತೆ ಹಾನಿಗೊಳಗಾಗಿರುವ ಸಾಧ್ಯತೆಗಳ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ ಪರೀಕ್ಷೆಯನ್ನು ಅಮಾನ್ಯಗೊಳಿಸಲಾಗಿದೆ ಎಂದು ಎನ್‌ಟಿಎ ತಿಳಿಸಿದೆ. “ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಕಾಪಾಡುವ ದೃಷ್ಟಿಯಿಂದ ಪರೀಕ್ಷೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ” ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಏನಿದು ಆರೋಪ
ಪರೀಕ್ಷೆಗೆ ಕೆಲವು ದಿನಗಳ ಮೊದಲು ಸುಮಾರು ೪೦೦ ಪ್ರಶ್ನೆಗಳಿರುವ ಪ್ರಶ್ನಾ ಸೆಟ್‌ಗಳು ಕೆಲ ವಿದ್ಯಾರ್ಥಿಗಳಿಗೆ ವಿತರಿಸಲ್ಪಟ್ಟಿದ್ದವು ಎಂಬ ಆರೋಪ ಕೇಳಿಬಂದಿದೆ. ಈ ಪೈಕಿ ಜೀವವಿಜ್ಞಾನ ಮತ್ತು ರಸಾಯನವಿಜ್ಞಾನ ವಿಭಾಗದ ೧೦೦ಕ್ಕೂ ಹೆಚ್ಚು ಪ್ರಶ್ನೆಗಳು ಅಸಲಿ ನೀಟ್- ಯುಜಿ ಪ್ರಶ್ನೆಪತ್ರಿಕೆಯ ಪ್ರಶ್ನೆಗಳೊಂದಿಗೆ ಹೋಲಿಕೆ ಹೊಂದಿವೆ ಎನ್ನಲಾಗಿದೆ.
ಇದರಿಂದ ಪ್ರಶ್ನೆಪತ್ರಿಕೆ ಸೋರಿಕೆಯ ಶಂಕೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಎನ್‌ಟಿಎ ಪ್ರಕಾರ, ಮೇ ೩ರಂದು ನಡೆದ ನೀಟ್ ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯಡಿ ನಡೆಸಲಾಗಿದೆ ಪ್ರಶ್ನೆಪತ್ರಿಕೆಗಳನ್ನು ಟ್ರ್ಯಾಕಿಂಗ್ ಹೊಂದಿದ ವಾಹನಗಳಲ್ಲಿ ಸಾಗಿಸಲಾಗಿತ್ತು,ಪರೀಕ್ಷಾ ಕೇಂದ್ರಗಳಲ್ಲಿ ಎಐ ಆಧಾರಿತ ಸಿಸಿಟಿವಿ ನಿಗಾವ್ಯವಸ್ಥೆ ಅಳವಡಿಸಲಾಗಿತ್ತು,ಅಭ್ಯರ್ಥಿಗಳ ಬಯೋಮೆಟ್ರಿಕ್ ಪರಿಶೀಲನೆ ನಡೆಸಲಾಗಿತ್ತು
೫ಉ ಜಾಮರ್‌ಗಳನ್ನು ಬಳಸಿ ಎಲೆಕ್ಟ್ರಾನಿಕ್ ಸಂಪರ್ಕ ನಿರ್ಬಂಧಿಸಲಾಗಿತ್ತು,ಪರೀಕ್ಷೆ ಮುಗಿದ ನಾಲ್ಕು ದಿನಗಳ ಬಳಿಕ, ಮೇ ೭ರಂದು ಅಕ್ರಮದ ಬಗ್ಗೆ ಮಾಹಿತಿ ಲಭಿಸಿದೆ ಎಂದು ಎನ್‌ಟಿಎ ತಿಳಿಸಿದೆ, ತಕ್ಷಣವೇ ಕೇಂದ್ರ ತನಿಖಾ ಸಂಸ್ಥೆಗಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದ್ದು, ತನಿಖೆಗೆ ಅಗತ್ಯವಿರುವ ಎಲ್ಲಾ ಪರೀಕ್ಷಾ ದತ್ತಾಂಶ ಮತ್ತು ತಾಂತ್ರಿಕ ನೆರವನ್ನು ಒದಗಿಸಲಾಗುತ್ತಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.
ಮರುನೋಂದಣಿ ಅಗತ್ಯವಿಲ್ಲ
ಮರುಪರೀಕ್ಷೆಗೆ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.ಈಗಾಗಲೇ ಸಲ್ಲಿಸಿರುವ ಅರ್ಜಿಗಳು ಮಾನ್ಯವಾಗಿರುತ್ತವೆಆಯ್ಕೆ ಮಾಡಿದ್ದ ಪರೀಕ್ಷಾ ಕೇಂದ್ರಗಳು ಯಥಾಸ್ಥಿತಿಯಲ್ಲಿರುತ್ತವೆಹೆಚ್ಚುವರಿ ಪರೀಕ್ಷಾ ಶುಲ್ಕ ವಿಧಿಸಲಾಗುವುದಿಲ್ಲ
ಈಗಾಗಲೇ ಪಾವತಿಸಿದ ಶುಲ್ಕವನ್ನು ಹಿಂತಿರುಗಿಸಲಾಗುತ್ತದೆ. ಹೊಸ ಪ್ರವೇಶ ಪತ್ರಗಳನ್ನು ನಂತರ ವದಂತಿಗಳಿಗೆ ಕಿವಿಗೊಡಬೇಡಿ.
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಮಾಹಿತಿಗೆ ಕಿವಿಗೊಡದೇ, ಎನ್‌ಟಿಎ ಅಧಿಕೃತ ಪ್ರಕಟಣೆಗಳನ್ನು ಮಾತ್ರ ನಂಬುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮರುಪರೀಕ್ಷೆಯ ದಿನಾಂಕ ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳು ತಮ್ಮ ಸಿದ್ಧತೆಯನ್ನು ಮುಂದುವರಿಸಬೇಕಾಗಿದೆ.
ಪರೀಕ್ಷಾ ಭದ್ರತೆ ಬಗ್ಗೆ ಮತ್ತೆ ಚರ್ಚೆ
ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಓಇಇಖಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದಿರುವುದು ಶಿಕ್ಷಣ ವ್ಯವಸ್ಥೆಯ ಭದ್ರತೆ ಕುರಿತು ಮತ್ತೆ ಆತಂಕ ಮೂಡಿಸಿದೆ. ಪರೀಕ್ಷೆ ರದ್ದು ಮತ್ತು ಸಿಬಿಐ ತನಿಖೆ ಮೂಲಕ ಸರ್ಕಾರ ಅಕ್ರಮಗಳಿಗೆ ಶೂನ್ಯ ಸಹಿಷ್ಣುತೆ ತೋರಿಸಲು ಮುಂದಾಗಿದೆ.
ರಾಜಸ್ಥಾನದಲ್ಲಿ ೪೫ಕ್ಕೂ ಹೆಚ್ಚು ಮಂದಿ ವಶಕ್ಕೆ
ನೀಟ್ ಯುಜಿ ೨೦೨೬ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯಲ್ಲಿ ರಾಜಸ್ಥಾನದಲ್ಲಿ ಇದುವರೆಗೆ ೪೫ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋರಿಕೆಯಾದ ‘ಗೆಸ್ ಪೇಪರ್’ ಮುದ್ರಣಾಲಯದ ಹಂತದಲ್ಲಿಯೇ ಹೊರಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೆಲ ಮೂಲಗಳ ಪ್ರಕಾರ, ಪ್ರಶ್ನೆಪತ್ರಿಕೆಯ ಕೈಬರಹ ಪ್ರತಿಗಳು ಪರೀಕ್ಷೆಗೆ ಮುನ್ನವೇ ಹರಿದಾಡಿದ್ದವು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಂಘಟಿತ ಅಕ್ರಮ ನಡೆದಿದೆಯೇ ಎಂಬುದನ್ನು ಸಿಬಿಐ ತನಿಖೆ ನಡೆಸಲಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಮಾಹಿತಿಯನ್ನು ಒದಗಿಸಲು ಎನ್‌ಟಿಎ ಸಹಕರಿಸುವುದಾಗಿ ತಿಳಿಸಿದೆ.
ಮರು ಪರೀಕ್ಷೆ ನಡೆಸಲು ಎನ್‌ಟಿಎ ತೀರ್ಮಾನಿಸಿದೆ. ಹೊಸ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಮರುಪರೀಕ್ಷೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತೊಂದರೆ ಉಂಟಾಗಲಿದೆ ಎಂಬುದನ್ನು ಒಪ್ಪಿಕೊಂಡಿರುವ ಎನ್‌ಟಿಎ, ಅಕ್ರಮದ ನೆರಳಿನಲ್ಲಿರುವ ಪರೀಕ್ಷೆಯನ್ನು ಮಾನ್ಯಗೊಳಿಸುವುದಕ್ಕಿಂತ ಇದು ಉತ್ತಮ ಕ್ರಮ ಎಂದು ಸ್ಪಷ್ಟಪಡಿಸಿದೆ.


























