
ತಿಪಟೂರು, ಮಾ. ೭- ರಾಜಿ ಸಂಧಾನದ ಮೂಲಕ ಯಾವುದೇ ನ್ಯಾಯಾಲಯದ ಶುಲ್ಕವಿಲ್ಲದೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮಾ.೧೪ ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜನಸಾಮಾನ್ಯರಿಗಾಗಿ ಇರುವಂತಹ ಉತ್ತಮ ವೇದಿಕೆ. ಇದರಲ್ಲಿ ಸೌಹಾರ್ದಯುತವಾಗಿ ರಾಜಿ ಸಂಧಾನದ ಮುಖಾಂತರ ಪ್ರಕರಣಗಳನ್ನು ಹೆಚ್ಚು ಕಾಲಾವಕಾಶ ತೆಗೆದುಕೊಳ್ಳದೆ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಂತ್ ಕುಮಾರ್ ಸಿ.ಆರ್. ತಿಳಿಸಿದರು.
ನಗರದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ನಡೆದ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಮ್ಮದ್ ಆರಿಫುಲ್ಲ ಸಿ.ಎಫ್ ಮಾತನಾಡಿ, ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಕರಣಗಳು ಹೆಚ್ಚು ಕಾಲಾವಕಾಶ ತೆಗೆದುಕೊಳ್ಳದೆ, ಸೌಹಾರ್ದಯುತವಾಗಿ ಮುಗಿಯಬೇಕು. ಪ್ರಕರಣಗಳನ್ನು ವಕೀಲರ ಮೂಲಕವಾಗಲಿ ಅಥವಾ ವೈಯಕ್ತಿಕವಾಗಲಿ ಬಗೆಹರಿಸಿಕೊಳ್ಳ ಬಹುದು ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಭರತ್‌ಚಂದ್ರ ಕೆ.ಎಸ್. ಮಾತನಾಡಿ, ಸದರಿ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ಪ್ರಕರಣಗಳು, ಅಪಘಾತ ಪ್ರಕರಣಗಳು, ವಿಮೆ ಸಂಬಂಧಿತ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಸ್ತ್ರೀಶಕ್ತಿ ಸಂಘದವರು ಬ್ಯಾಂಕುಗಳಿಂದ ಪಡೆದ ಸಾಲದ ಪ್ರಕರಣಗಳು, ಎಂ.ಎಂ.ಡಿ.ಆರ್. ಪ್ರಕರಣಗಳು, ಪಾಲು ವಿಭಾಗ ಪ್ರಕರಣಗಳು, ಎಲ್.ಎ.ಸಿ. ಹಾಗೂ ಇನ್ನಿತರ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಅಧಿಕ ಸಿವಿಲ್ ನ್ಯಾಯಾಧೀಶರಾದ ಮಧುಶ್ರೀ.ಜಿ.ಎಸ್.ಮಾತನಾಡಿ, ಈಗಾಗಲೇ ಸದರಿ ಇತ್ಯರ್ಥಪಡಿಸಿಕೊಳ್ಳಬಹುದಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್‌ಗಳು ನಡೆಯುತ್ತಿದ್ದು ತಮ್ಮ ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಸದರಿ ಲೋಕ ಅದಾಲತ್‌ನಲ್ಲಿ ಪರಿಹರಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಮ್ಮ ತಮ್ಮ ವ್ಯಾಪ್ತಿಯ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ವಕೀಲರ ಸಂಘದ ತಾ. ಅಧ್ಯಕ್ಷ ಎಂ.ಸಿನಟರಾಜು, ಕಾರ್ಯದರ್ಶಿ ಬಿ.ಕೆಚನ್ನಕೇಶವ,ವಕೀಲರ ಸಂಘದ ಸದಸ್ಯರು ವಕೀಲರು ಉಪಸ್ಥಿತರಿದ್ದರು.

























