Home ಜಿಲ್ಲೆ ಅಂಬೇಡ್ಕರ್ ಸಮ್ಮೇಳನ ಹೆಸರಲ್ಲಿ ಅನುದಾನ ದುರ್ಬಳಕೆ: ಭಂತೆ ಧಮ್ಮನಾಗ

ಅಂಬೇಡ್ಕರ್ ಸಮ್ಮೇಳನ ಹೆಸರಲ್ಲಿ ಅನುದಾನ ದುರ್ಬಳಕೆ: ಭಂತೆ ಧಮ್ಮನಾಗ

ಬೀದರ:ಮಾ.11: ಮಾರ್ಚ್ 14 ಮತ್ತು 15 ರಂದು ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದೆ ಎನ್ನಲಾಗುತ್ತಿರುವ ಅಂಬೇಡ್ಕರ್ ಅವರ ಕುರಿತಾದ ವಿಚಾರಗಳ ಅಂತರಾಷ್ಟ್ರೀಯ ಸಮ್ಮೇಳನಕ್ಕಾಗಿ ಸರ್ಕಾರ ರೂ. 70 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಆದರೆ ಇದುವರೆಗೆ ಸಮ್ಮೇಳನದ ಮಾಹಿತಿಯನ್ನು ಬಹಿರಂಗಪಡಿಸದೆ ಅನುದಾನ ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ನಡೆದಿದೆ ಎಂದು ಬಸವಕಲ್ಯಾಣ ತಾಲೂಕಿನ ಹತ್ಯಾಳದ ಕರ್ನಾಟಕ ಶರಣ್ ಬಹುದೇಶಿಯ ಸೇವಾಭಾವಿ ಸಂಸ್ಥೆಯ ಅಧ್ಯಕ್ಷ ಮತ್ತು ಅಂತರಾಷ್ಟ್ರೀಯ ಬೌದ್ಧ ಭಿಕ್ಕು ಸಂಘದ ಉಪಾಧ್ಯಕ್ಷ ಭಂತೆ ಧಮ್ಮನಾಗ ಆರೋಪಿಸಿದರು.
ಈ ಕುರಿತು ಮಂಗಳವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಬೀದರ ನಗರದಲ್ಲಿ “ಡಾ. ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಮಕಾಲೀನ ಪರಿಹಾರಗಳು” ಕುರಿತು ಅಂತರಾಷ್ಟ್ರೀಯ ಸಮ್ಮೇಳನ ಆಯೋಜನೆಗಾಗಿ 2023 ರಿಂದ ನಿರಂತರವಾಗಿ ನಾನು ಪ್ರಯತ್ನ ಮಾಡುತ್ತ ಬಂದಿದ್ದೇನೆ. ಹೀಗಾಗಿ ಸರ್ಕಾರವು ಅಂಬೇಡ್ಕರ್ ಸಂಶೋಧನಾ ಕೇಂದ್ರದ ವತಿಯಿಂದ ರೂ. 70 ಲಕ್ಷ ಅನುದಾನವನ್ನು ಕಳೆದ 2025ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಕೂಡಾ ಮಾಡಿದೆ. ಆದರೆ ನನಗೆ ಹಾಗೂ ಅಂಬೇಡ್ಕರವಾದಿ ಸಂಘ-ಸಂಸ್ಥೆಗಳಿಗೆ ಮಾಹಿತಿ ನೀಡದೆ, ಯಾವುದೇ ಪೂರ್ವಭಾವಿ ಸಭೆ ಮಾಡದೆ, ಸಮ್ಮೇಳನದ ಯಶಸ್ವಿಗಾಗಿ ಇ-ಟೆಂಡರಿಂಗ್ ಕರೆಯದೆ, ಸಮಿತಿ ಉಪಸಮಿತಿಗಳನ್ನು ರಚನೆ ಮಾಡದೆ ತರಾತುರಿಯಲ್ಲಿ ನಾಲ್ಕೇ ದಿನದಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ಮಾಡಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅನುದಾನ ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಸಮ್ಮೇಳನವನ್ನು ಎರಡು ತಿಂಗಳು ಮುಂದೂಡಬೇಕು. ಅಂತರಾಷ್ಟ್ರೀಯ ಮಟ್ಟದ ಅತಿಥಿಗಳನ್ನು ಬೀದರ ನಗರಕ್ಕೆ ಕರೆಸಿ ಡಾ. ಬಾಬಾ ಸಾಹೇಬರ ವಿಚಾರಧಾರೆಗಳನ್ನು ವಿಶ್ವಮಟ್ಟದಲ್ಲಿ ತಿಳಿಸುವ ಪ್ರಯತ್ನ ಮಾಡಬೇಕು. ನಾನು ಈಗಾಗಲೇ ಜಪಾನ್, ಜರ್ಮನಿ, ಸೌಥ್ ಆಫ್ರಿಕಾ, ಲಂಡನ್ ಹಾಗೂ ರಷ್ಯಾ ದೇಶದ ಅತಿಥಿಗಳನ್ನು ಆಹ್ವಾನ ಮಾಡಿದ್ದೆ. ಸಮ್ಮೇಳನದ ಆಯೋಜನೆಗಾಗಿ ಹಗಲಿರುಳು ಶ್ರಮಿಸಿದ್ದೇನೆ. ಆದರೆ ಇದುವರೆಗೆ ಆಮಂತ್ರಣ ಪತ್ರಿಕೆ, ಕಟೌಟ್‍ಗಳು, ಬ್ಯಾನರ್‍ಗಳು ಹಾಗೂ ಪ್ರಚಾರ ಕಾರ್ಯ ಮಾಡದೆ ಸಮ್ಮೇಳನದ ಆಶಯಗಳನ್ನು ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರ ಚಿಂತನೆಗಳನ್ನು ಗಾಳಿಗೆ ತೂರುವ ಕಾರ್ಯ ಮಾಡುತ್ತಿರುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಸಮಾಜದ ಮುಖಂಡರು ಕುರುಡ ಕಿವುಡರಾಗಿ ಕುಳಿತುಕೊಳ್ಳದೆ ಹೋರಾಟ ಮಾಡಬೇಕಾಗಿದೆ. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಭಂತೆಜಿ ಎಚ್ಚರಿಕೆ ನೀಡಿದರು.
ಮುಂದುವರೆದು ಮಾತನಾಡಿದ ಭಂತೆಜಿಯವರು ಅತಿಥಿಗಳ ಆಹ್ವಾನ, ವಸತಿ ವ್ಯವಸ್ಥೆ, ಗೌರವಧನ, ಪ್ರಯಾಣದರದಂತಹ ನಿರ್ಣಾಯಕ ಸೇವೆಗಳಿಗೆ ಇ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಲ್ಲ. ಪ್ರಶಸ್ತಿಗಳು ಒಂದೇ ಕಂಪನಿಗೆ ಅಥವಾ ಬಹು ಮಾರಾಟಗಾರರಿಗೆ ಹೋಗಿವೆಯೇ ಎಂಬುದು ಅನುಮಾನಾಸ್ಪದವಾಗಿದೆ. ಕಾಟಾಚಾರದ ಅಂತರಾಷ್ಟ್ರೀಯ ಸಮ್ಮೇಳನ ಮಾಡಿ ಅನುದಾನ ದುರ್ಬಳಕೆ ಮಾಡಿಕೊಳ್ಳದೆ ಸಮಾಜದ ಸಂಘಟನೆಗಳನ್ನು ಪರಿಗಣನೆಗೆ ತೆಗೆದುಕೊಂಡು ಯಶಸ್ವಿಯಾಗಿ ಸಮ್ಮೇಳನ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಥವಾ ಸಮಾಜ ಕಲ್ಯಾಣ ಇಲಾಖೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಅದಕ್ಕೂ ಬಗ್ಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಪೂಜ್ಯ ಭಂತೆ ಸಂಘಜ್ಯೋತಿ ಸೇರಿದಂತೆ ಇನ್ನಿತರ ಬೌದ್ಧ ಭಿಕ್ಕುಜಿಯವರು ಉಪಸ್ಥಿತರಿದ್ದರು