
ಬೆಂಗಳೂರು, ಮಾ. ೭-ದೈಹಿಕ ಚಟುವಟಿಕೆಗಳಿಂದ ಉತ್ತಮ ಆರೋಗ್ಯ, ಮಾನಸಿಕ ಶಾಂತಿ ಹಾಗೂ ನೆಮ್ಮದಿ ಸಿಗುತ್ತದೆ. ಮನಸ್ಸು ಶಾಂತವಾಗಿದ್ದರೆ ವಾಹನ ಚಾಲನೆ ಹಾಗೂ ಪ್ರಯಾಣದ ವೇಳೆ ಎಚ್ಚರಿಕೆಯಿಂದ ಇರಲು ಸಾಧ್ಯವಾಗುತ್ತದೆ. ಅದರಿಂದ ರಸ್ತೆ ಸುರಕ್ಷತೆಯೂ ಸಾಧ್ಯವಾಗುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರಿಗೆ ಇಲಾಖೆ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ “ನಮ್ಮ ರಸ್ತೆ ? ನಮ್ಮ ಸುರಕ್ಷತೆ” ೫ಕೆ ‘ಸೇಫ್ ಎ ಥಾನ್’ (ವಾಕಿಂಗ್, ರನ್ನಿಂಗ್, ಸೈಕ್ಲಿಂಗ್, ಬೈಕಿಂಗ್) ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಪಘಾತಗಳಿಗೆ ಇತರರನ್ನು ದೂಷಿಸುವುದಕ್ಕಿಂತ ಮೊದಲು ನಾವು ಸ್ವತಃ ಎಚ್ಚರಿಕೆ ವಹಿಸಬೇಕು. ಬೆಂಗಳೂರಿನಂತಹ ಮಹಾನಗರದಲ್ಲಿ ಅವಸರ ಮತ್ತು ಗಡಿಬಿಡಿಯೇ ಹೆಚ್ಚಿನ ಅಪಘಾತಗಳಿಗೆ ಕಾರಣವಾಗುತ್ತದೆ. ಸ್ವಲ್ಪ ಮುಂಚಿತವಾಗಿ ಹೊರಟರೆ ಅವಸರದ ಪರಿಸ್ಥಿತಿ ಉಂಟಾಗುವುದಿಲ್ಲ. ಅವಸರದಲ್ಲಿರುವಾಗ ಮನಸ್ಸಿನ ಮೇಲೆ ಒತ್ತಡ ಬೀಳುತ್ತದೆ ಮತ್ತು ಅದು ವಿವಿಧ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ ಎಂದು ಸಚಿವರು ತಿಳಿಸಿದರು.
ಸಾರಿಗೆ ಆಯುಕ್ತ ಯೋಗೀಶ್ ಎ.ಎಂ ಮಾತನಾಡಿ, ರಸ್ತೆ ಸುರಕ್ಷತೆ ಕೇವಲ ನಿಯಮ ಪಾಲನೆಗೆ ಸೀಮಿತವಾಗಿಲ್ಲ. ಅದು ಪ್ರತಿಯೊಬ್ಬ ನಾಗರಿಕನ ಅಮೂಲ್ಯ ಜೀವವನ್ನು ಉಳಿಸುವ ಮಹತ್ತರ ಜವಾಬ್ದಾರಿಯಾಗಿದೆ. ರಸ್ತೆಯಲ್ಲಿ ಸಂಚರಿಸುವಾಗ ನಾವು ತೋರುವ ಎಚ್ಚರಿಕೆ ಮತ್ತು ಸಂಯಮವು ನಮ್ಮ ಕುಟುಂಬದ ಭವಿಷ್ಯಕ್ಕೂ ಹಾಗೂ ಇತರರ ಪ್ರಾಣಕ್ಕೂ ರಕ್ಷಣೆ ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಅಪಘಾತರಹಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ರಸ್ತೆ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ತುರ್ತು ಅಗತ್ಯ ಅಥವಾ ಶೋಕಿಗಾಗಿ ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವುದರಿಂದಲೇ ಬಹುತೇಕ ಅಪಘಾತಗಳು ಸಂಭವಿಸುತ್ತಿವೆ. ನಗರದಲ್ಲಿ ಅಪಘಾತಗಳನ್ನು ತಡೆಯಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಒನ್-ವೇ ಉಲ್ಲಂಘನೆ ಮತ್ತು ವ್ಹೀಲಿಂಗ್ ಮಾಡುವವರ ವಿರುದ್ಧ ಈಗಾಗಲೇ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.
ಕ್ರಿಕೆಟಿಗ ಸುನೀಲ್ ಜೋಶಿ ಮಾತನಾಡಿ, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಇದು ಚಾಲಕರಿಗೂ ಹಾಗೂ ಇತರರ ಜೀವಕ್ಕೂ ಅಪಾಯಕಾರಿಯಾಗಿದೆ. ತುರ್ತು ಅಗತ್ಯವಿದ್ದರೆ ವಾಹನವನ್ನು ಸುರಕ್ಷಿತವಾಗಿ ಪಕ್ಕಕ್ಕೆ ನಿಲ್ಲಿಸಿ ನಂತರವೇ ಫೋನ್‌ನಲ್ಲಿ ಮಾತನಾಡಬೇಕು ಎಂದು ಸಲಹೆ ನೀಡಿದರು.
ಈ ‘ಸೇಫ್ ಎ ಥಾನ್’ ಜಾಗೃತಿ ಕಾರ್ಯಕ್ರಮದಲ್ಲಿ ಸುಮಾರು ೧೩,೦೦೦ ಜನರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಕಾವೇರಿ ಆಸ್ಪತ್ರೆಯ ಅಧ್ಯಕ್ಷ ವಿಜಯ ಭಾಸ್ಕರನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
























