
ರಬಕವಿ-ಬನಹಟ್ಟಿ,ಏ.6 : ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿ ತಮ್ಮದೇ ಪಾರುಪತ್ಯ ಮೆರೆಯುತ್ತಿದ್ದು, ಮಹಿಳಾ ಸಬಲೀಕರಣ ಮೂಡಲು ಮಹಿಳೆಯರು ಬಿಡದೇ ಸಾಧಿಸಬೇಕೆಂಬ ಛಲ ಮತ್ತು ಅವರ ಗುರಿಗೆ ಬೆಂಬಲವಾಗಿ ನಿಂತ ಪುರುಷರದ್ದೂ ಪಾತ್ರವಿದೆ ಎಂದು ಅಥಣಿಯ ಸಾಹಿತಿ, ಉಪನ್ಯಾಸಕಿ ಪ್ರಿಯಂವದಾ ಹುಲಗಬಾಳಿ ಹೇಳಿದರು.
ರಬಕವಿ ಬಣಜಿಗ ಸಮಾಜದ ಶ್ರೀದೇವಿ ಮಹಿಳಾ ಮಂಡಳದ ರಜತ ಮಹೋತ್ಸವ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಣಜಿಗ ಸಮಾಜದ ಮಹಿಳೆಯರು ಕಳೆದ ಇಪ್ಪತ್ತೈದು ವರ್ಷಗಳಿಂದ ಸಂಘಟಿತರಾಗಿ ಸಮಾಜಸೇವೆಯತ್ತ ಕ್ರೀಯಾಶೀಲರಾಗಿರುವುದು ಅನುಕರಣೀಯ. ಲಿಂಗ ತಾರತಮ್ಯನೀತಿ ಅಳಿಸಿ ಹಾಕಿದ ಶರಣ ಪರಂಪರೆಯಿಂದ ಪ್ರೇರಿತ ಸಮಾಜದಲ್ಲಿ ಮಹಿಳೆಯರ ಕಾರ್ಯಕ್ರಮಕ್ಕೆ ಸಮಾಜದ ಪುರುಷರು ಸಹಾಯ ನೀಡುವ ಮೂಲಕ ಶರಣ ಪರಂಪರೆಯು ಇನ್ನೂ ಜೀವಂತವಾಗಿದೆ ಎಂದು ಬಿಂಬಿಸಿದ್ದಾರೆಂದರು. ಕಾಂಗ್ರೆಸ್ ಧುರೀಣೆ ಕವಿತಾ ಸಿದ್ದು ಕೊಣ್ಣೂರ ಮಾತನಾಡಿ ಮಹಿಳೆಯರು ಇಂದು ವಿಶ್ವವಂದ್ಯÁಗಿದ್ದು, ಸಾಮಾಜಿಕ, ರಾಜಕೀಯ, ಆರ್ಥಿಕ, ಸೇವಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಹೊಂದಿದ್ದಾರೆ. ಮಹಿಳೆ ಕುಟುಂಬದ ಕಣ್ಣಾಗಿದ್ದು, ಮೊದಲು ತಮ್ಮ ಸಂತಾನಗಳಿಗೆ ಶಿಕ್ಷಣ ನೀಡುವತ್ತ ಹಾಗೂ ಉತ್ತಮ ಸಂಸ್ಕಾರ, ನಡೆ-ನುಡಿಗಳ ಕಲಿಸುವ ಮೂಲಕ ಸದೃಢ ಸಮಾಜ ನಿರ್ಮಿಸಬೇಕು. ಸ್ವಸ್ಥ್ಯ ಸಮಾಜದಿಂದ ದೇಶದ ಬಲ ಹೆಚ್ಚುವುದು ಎಂದರು.
ವೇದಿಕೆಯಲ್ಲಿ ಹಿರಿಯರಾದ ಪಾರ್ವತಮ್ಮ ಗೌರಿಹರ ಮುತ್ತೂರ ಅಧ್ಯಕ್ಷತೆ ವಹಿಸಿದ್ದರು. ಶೋಭಾ ನಾಶಿ, ಅಧ್ಯಕ್ಷೆ ಶಿಲ್ಪಾ ಮುತ್ತೂರ, ಮಧು ಢಪಳಾಪುರ, ರೇಖಾ ತೆಗ್ಗಿ ಉಪಸ್ಥಿತರಿದ್ದರು. ಎಂ.ಎಸ್.ಗಡೆಣ್ಣವರ ಪ್ರಾರ್ಥಿಸಿದರು. ಸುಹಾನಿ ಮುತ್ತೂರ ನೃತ್ಯ ರೂಪಕ ಪ್ರದರ್ಶಿಸಿದರು. ಶ್ರೀದೇವಿ ಪರಮಶೆಟ್ಟಿ ಸ್ವಾಗತಿಸಿದರು. ವಿದ್ಯಾ ಮೂಡಲಗಿ ನಿರೂಪಿಸಿದರು. ಭಾಗ್ಯ ಮುತ್ತೂರ ವಂದಿಸಿದರು.
ಮಹಾದೇವಪ್ಪ ಮುತ್ತೂರ, ಮಲ್ಲಿಕಾರ್ಜುನ ನಾಶಿ, ಚಂದ್ರಶೇಖರ ಹುಲಗಬಾಳಿ, ಅಶೋಕ ಕೋತೀನ, ಬಸವರಾಜ ತೆಗ್ಗಿ, ಸೋಮಶೇಖರ ಕೊಟ್ರಶೆಟ್ಟಿ, ನೀಲಕಂಠ ಮುತ್ತೂರ, ಗಜಾನನ ತೆಗ್ಗಿ, ರವೀಂದ್ರ ಅಷ್ಟಗಿ, ಮಲ್ಲು ಢಪಳಾಪುರ, ರವಿ ಮುತ್ತೂರ, ಉದಯ ಜಿಗಜಿನ್ನಿ, ಸುನೀಲ ಕುಳ್ಳೊಳ್ಳಿ, ಮಹಾಶಾಂತ ಶೆಟ್ಟಿ ಸೇರಿದಂತೆ ಅನೇಕರಿದ್ದರು.






















