Home ಜಿಲ್ಲೆ ಜಮಖಂಡಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಭಾರೀ ಅಕ್ರಮ ಆರೋಪ

ಜಮಖಂಡಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಭಾರೀ ಅಕ್ರಮ ಆರೋಪ

ಸಂಜೆ ವಾಣಿ ವಾರ್ತೆ,
ಜಮಖಂಡಿ:ಏ.೧೬: ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಪತ್ರಿಕಾಗೋಷ್ಠಿಯಲ್ಲಿ ಈರಪ್ಪ ಸುತಾರ ಗಂಭೀರ ಆರೋಪಗಳನ್ನು ಹೊರಿಸಿದರು.
ನಗರದ ಖಾಸಗಿ ಹೊಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿಯಮ ಪ್ರಕಾರ ಪೂರ್ಣಾವಧಿ ಅತಿಥಿ ಉಪನ್ಯಾಸಕರು ಇತರೆ ಕಾಲೇಜುಗಳಲ್ಲಿ ಕೆಲಸ ಮಾಡುವಂತಿಲ್ಲ. ಆದರೆ ಹುಣ್ಣೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲ ಉಪನ್ಯಾಸಕರು ಸಮೀಪದ ಖಾಸಗಿ ಕಾಲೇಜುಗಳಲ್ಲಿಯೂ ಒಂದೇ ವೇಳೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ದಾಖಲೆಗಳೊಂದಿಗೆ ಆರೋಪಿಸಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸಹ ಕೆಲ ಉಪನ್ಯಾಸಕರು ಎರಡೂ ಕಡೆ ಕಾರ್ಯನಿರ್ವಹಿಸುತ್ತಿರುವುದು ಸರ್ಕಾರದ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದರು.
ಇದೇ ವೇಳೆ, ನಕಲಿ ಸೇವಾ ಪ್ರಮಾಣಪತ್ರಗಳ ಮೂಲಕ ಗ್ರೇಸ್ ಮಾರ್ಕ್ಸ್ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೆಲವು ಪ್ರಾಚಾರ್ಯರ ಪಾತ್ರದ ಮೇಲೂ ಅನುಮಾನ ವ್ಯಕ್ತವಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಮಾಹಿತಿಗೆ ಸರಿಯಾದ ಉತ್ತರ ನೀಡದೇ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಸಂಬAಧಪಟ್ಟ ಉಪನ್ಯಾಸಕರನ್ನು ತಕ್ಷಣ ಅಮಾನತು ಮಾಡಿ, ಕ್ರಿಮಿನಲ್ ಪ್ರಕರಣ ದಾಖಲಿಸಿ, ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೀಮ ಆರ್ಮಿ ಭಾರತ ಏಕತಾ ಮಿಷನ್ ಜಿಲ್ಲಾಧ್ಯಕ್ಷ ರಮೇಶ್ ಬಳೋಲಗಿಡದ ಮಾತನಾಡಿ, ಕಳೆದ ಮೂರು ತಿಂಗಳಿAದ ಈ ವಿಚಾರವಾಗಿ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದರು. ೧೫ ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಇದೇ ವೇಳೆ ಕೆಲವು ವಿದ್ಯಾರ್ಥಿಗಳಿಂದ ಉಪನ್ಯಾಸಕರ ವಿರುದ್ಧ ಕಿರುಕುಳ ಹಾಗೂ ಅಸಭ್ಯ ವರ್ತನೆ ಆರೋಪಗಳು ಬಂದಿರುವುದಾಗಿ ತಿಳಿಸಿ, ಇಂತಹ ಶಿಕ್ಷಕರನ್ನು ತಕ್ಷಣ ಅಮಾನತು ಮಾಡಬೇಕು ಹಾಗೂ ನೀಡಿದ ವೇತನವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ವಲಯದಲ್ಲಿ ಈ ವಿಚಾರ ಗಂಭೀರ ಚರ್ಚೆಗೆ ಗ್ರಾಸವಾಗಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.