
ಯಾದಗಿರಿ:ಮಾ.೩೦:ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮದ ೧೩೨ನೇ ಸಂಚಿಕೆಯನ್ನು ಯಾದಗಿರಿ ನಗರದಲ್ಲಿ ಭಾನುವಾರ ವಿಭಿನ್ನ ರೀತಿಯಲ್ಲಿ ವೀಕ್ಷಿಸಲಾಯಿತು. ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಾಗರಿಕರು ಒಟ್ಟುಗೂಡಿ ಕಾರ್ಯಕ್ರಮವನ್ನು ಅನುಸರಿಸಿ, ದೇಶದ ಪ್ರಗತಿ ಕುರಿತ ವಿಚಾರಗಳಿಗೆ ಸ್ಪಂದಿಸಿದರು.
ಯಾದಗಿರಿ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಆಯೋಜಿಸಲಾದ ವೀಕ್ಷಣಾ ಕಾರ್ಯಕ್ರಮಗಳಲ್ಲಿ ಜನರ ಭಾಗವಹಿಸುವಿಕೆ ಗಮನಾರ್ಹವಾಗಿತ್ತು. ವಿಶೇಷವಾಗಿ ನಗರದಲ್ಲಿನ ಒಂದು ಬೂತ್ ಕೇಂದ್ರದಲ್ಲಿ ಕಾರ್ಯಕರ್ತರು ಸೇರಿ ಕಾರ್ಯಕ್ರಮವನ್ನು ವೀಕ್ಷಿಸಿ, ಪ್ರಧಾನಿಯವರ ಮಾತುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ತಮ್ಮ ಮಾತಿನಲ್ಲಿ ಸ್ವಾವಲಂಬನೆ, ಪರಿಸರ ಕಾಳಜಿ, ಡಿಜಿಟಲ್ ಪ್ರಗತಿ ಹಾಗೂ ಯುವಕರ ಸಾಧನೆಗಳ ಕುರಿತು ಪ್ರಸ್ತಾಪಿಸಿದರು. ದೇಶದ ಅಭಿವೃದ್ಧಿಯಲ್ಲಿ ಸಾಮಾನ್ಯ ನಾಗರಿಕರ ಪಾತ್ರ ಮಹತ್ವದ್ದು ಎಂದು ಅವರು ತಿಳಿಸಿದರು. ಮಹಿಳಾ ಸಬಲೀಕರಣ, ಸ್ಥಳೀಯ ಉತ್ಪನ್ನಗಳ ಉತ್ತೇಜನ ಮತ್ತು ಸ್ವಚ್ಛತೆ ಕುರಿತ ಅಭಿಯಾನಗಳಿಗೂ ವಿಶೇಷ ಒತ್ತು ನೀಡಿದರು.
ಕಾರ್ಯಕ್ರಮದ ಬಳಿಕ ಮಾತನಾಡಿದ ಸ್ಥಳೀಯ ಬಿಜೆಪಿ ಮುಖಂಡರು, ‘ಮನ್ ಕಿ ಬಾತ್’ ಕಾರ್ಯಕ್ರಮವು ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಧಾನಿಯವರ ಸಂದೇಶಗಳನ್ನು ಜನರಿಗೆ ತಲುಪಿಸುವ ಕಾರ್ಯ ಮುಂದುವರಿಯಬೇಕೆAದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಹಲವು ಮುಖಂಡರು, ಯುವ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಕಾರ್ಯಕ್ರಮವು ಜನಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.






















