Home ಮುಖಪುಟ ಸುದ್ದಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯಲ್ಲಿ ಹಣ ಲೂಟಿ: ತನಿಖೆ ಚುರುಕು

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯಲ್ಲಿ ಹಣ ಲೂಟಿ: ತನಿಖೆ ಚುರುಕು

ಅಯೋಧ್ಯೆ,ಜು೭: ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದಲ್ಲೂ ಹಣ ಲೂಟಿ ಮಾಡಿರುವುದು ಬೆಳಕಿಗೆ ಬಂದಿದ್ದು ಈ ಬಗ್ಗೆಯೂ ಈಗ ತನಿಖೆ ನಡೆದಿದೆ ಅಯೋಧ್ಯೆಯಲ್ಲಿ ೨೦೨೪ರಲ್ಲಿ ನಡೆದ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ೧೨೪ ಕೋಟಿಗೂ ಹೆಚ್ಚು ಹಣ ವೆಚ್ಚವಾಗಿದೆ ಎಂದು ಹೇಳಲಾಗಿದ್ದು ಈ ಕಾರ್ಯಕ್ರಮಕ್ಕೆ ವೆಚ್ಚ ಮಾಡಿದ ಹಣದಲ್ಲೂ ಲೂಟಿಯಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.


ಈ ಕಾರ್ಯಕ್ರಮಕ್ಕೆ ವೆಚ್ಚ ಮಾಡಿರುವ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದ್ದು ಕಾರ್ಯಕ್ರಮದ ಆಯೋಜನೆಯಲ್ಲಿ ಹಣ ಲೂಟಿ ಆಗಿದೆಯೇ ಎಂಬ ಬಗ್ಗೆ ಈಗ ಅಧಿಕಾರಿಗಳು ತನಿಖೆ ನಡೆಸಿದ್ದಾರೆ ಅಯೋಧ್ಯ ಶ್ರೀರಾಮ ಮಂದಿರದಲ್ಲಿ ದೇಣಿಗೆ ರೂಪದಲ್ಲಿ ಬಂದಿದ್ದ ಹಣಕ್ಕೆ ಕನ್ನ ಹಾಕಿರುವ ಬಗ್ಗೆ ನಡೆದಿರುವ ತನಿಖೆ ಚುರುಕಾಗಿದ್ದು ಈಗ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದಲ್ಲೂ ಹಣ ಲೂಟಿ ಮಾಡಿರುವ ಬಗ್ಗೆ ತನಿಖೆ ನಡೆದಿದೆ


ಬರೋಬ್ಬರಿ ೧೨೪ ಕೋಟಿ ರೂಪಾಯಿಗೂ ವೆಚ್ಚದ ದಾಖಲೆಗಳನ್ನು ಎಸ್‌ಐಟಿ ಅಧಿಕಾರಿಗಳು ಪ್ರಸ್ತುತ ಕೂಲಂಕಷ ಪರಿಶೀಲನೆಗೆ ಒಳಪಡಿಸಿದ್ದಾರೆ.ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹಣಕಾಸು ವ್ಯವಹಾರಗಳ ಮೇಲಿನ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಮತ್ತಷ್ಟು ಚುರುಕುಗೊಳಿಸಿದೆ.

ಕಳೆದ ಕೆಲವು ದಿನಗಳಿಂದ ಟ್ರಸ್ಟ್‌ನ ದೇಣಿಗೆ ಹಣ ದುರುಪಯೋಗದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು. ಆರಂಭದಲ್ಲಿ ಕೇವಲ ದೇಣಿಗೆ ಕಳ್ಳತನದ ದೂರಿಗೆ ಸೀಮಿತವಾಗಿದ್ದ ಈ ತನಿಖಾ ವ್ಯಾಪ್ತಿಯನ್ನು ಈಗ ಟ್ರಸ್ಟ್‌ನ ಒಟ್ಟಾರೆ ಹಣಕಾಸು ವ್ಯವಸ್ಥೆ, ನಿಯಮಾವಳಿಗಳ ಪಾಲನೆ ಮತ್ತು ಹಿರಿಯ ಅಧಿಕಾರಿಗಳ ಅನುಮೋದನೆ ಪ್ರಕ್ರಿಯೆಗಳ ಕಡೆಗೂ ವಿಸ್ತರಿಸಲಾಗಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ತನಿಖಾ ಸಂಸ್ಥೆಯ ಪ್ರಮುಖ ಆದ್ಯತೆ ಜನವರಿ ೨೨, ೨೦೨೪ ರಂದು ನಡೆದ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಮೇಲಿದೆ. ಸುಮಾರು ೮,೦೦೦ ಗಣ್ಯರು ಭಾಗವಹಿಸಿದ್ದ ಈ ಒಂದು ಕಾರ್ಯಕ್ರಮಕ್ಕೆ ಟ್ರಸ್ಟ್ ಬರೋಬ್ಬರಿ ೧೧೩ ಕೋಟಿ ರೂಪಾಯಿ ವೆಚ್ಚ ಮಾಡಿದೆ. ಆಡಿಟ್ ವರದಿಗಳ ಪ್ರಕಾರ ಪ್ರಮುಖ ವೆಚ್ಚಗಳು ಹೀಗಿವೆ:

ಶೆಡ್ ಹಾಗೂ ತಾತ್ಕಾಲಿಕ ಟೆಂಟ್ ಸಿಟಿ ನಿರ್ಮಾಣ ೩೫.೯೭ ಕೋಟಿ ,ಅಕ್ಷತ ಪೂಜೆ ಅಭಿಯಾನ: ೩೦.೮೫ ಕೋಟಿ,ಪ್ರಚಾರ ಮತ್ತು ಜಾಹೀರಾತು ೨೧.೭೭ ಕೋಟಿ,ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರ: ೧೪.೬೨ ಕೋಟಿ,ಅನ್ನದಾಸೋಹ (ಊಟದ ವ್ಯವಸ್ಥೆ):೫.೧೧ ಕೋಟಿ,ಧಾರ್ಮಿಕ ವಿಧಿವಿಧಾನಗಳು: ೧.೦೬ ಕೋಟಿ ರಾಗ ಸೇವೆ (ಭಕ್ತಿ ಸಂಗೀತ): ೯೩ ಲಕ್ಷ ವೆಚ್ಚ ಮಾಡಲಾಗಿದೆ.

ಧ್ವಜಾರೋಹಣಕ್ಕೂ ಕೋಟ್ಯಂತರ ರೂಪಾಯಿ ವೆಚ್ಚ


ಕಳೆದ ನವೆಂಬರ್ ೨೫, ೨೦೨೫ ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಡೆದ ರಾಮಮಂದಿರದ ಧ್ವಜಾರೋಹಣ ಕಾರ್ಯಕ್ರಮದ ವೆಚ್ಚವೂ ತನಿಖಾಧಿಕಾರಿಗಳ ಗಮನ ಸೆಳೆದಿದೆ. ಕೇವಲ ೬,೦೦೦ ಅತಿಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮಕ್ಕೆ ಒಟ್ಟು ೧೦.೧೨ ಕೋಟಿ ಖರ್ಚು ಮಾಡಲಾಗಿದ್ದು, ಅಂದರೆ ಸರಾಸರಿ ಒಬ್ಬ ಅತಿಥಿಗೆ ಸುಮಾರು ೧೬,೦೦೦ ವೆಚ್ಚ ತಗುಲಿದೆ! ಇದರೊಂದಿಗೆ ೨೦೨೫ರ ಮಹಾಕುಂಭ ಮೇಳದ ಸಂದರ್ಭದಲ್ಲಿ ಭಕ್ತರ ಸೌಕರ್ಯಕ್ಕಾಗಿ ?೪೩ ಲಕ್ಷ ಹಾಗೂ ಪ್ರಥಮ ಪ್ರತಿಷ್ಠಾ ದ್ವಾದಶಿ ಉತ್ಸವಕ್ಕೆ ೮೩ ಲಕ್ಷ ವೆಚ್ಚ ಮಾಡಿರುವ ದಾಖಲೆಗಳನ್ನೂ ಪರಿಶೀಲಿಸಲಾಗುತ್ತಿದೆ.

ಕೇವಲ ನಗದು ವೆಚ್ಚ ಮಾತ್ರವಲ್ಲದೆ, ಭಕ್ತರು ಸಮರ್ಪಿಸಿರುವ ಅಮೂಲ್ಯ ಆಭರಣಗಳು ಮತ್ತು ಧಾತುಗಳ ಲೆಕ್ಕಾಚಾರವನ್ನೂ ಎಸ್‌ಐಟಿ ತಾಳೆ ನೋಡುತ್ತಿದೆ. ನವೆಂಬರ್ ೨೦೨೪ ರಿಂದ ಫೆಬ್ರವರಿ ೨೦೨೫ ರ ನಡುವೆ ಭಕ್ತರಿಂದ ೨.೩ ಕೆಜಿ ಚಿನ್ನ ಮತ್ತು ೮೩.೩ ಕೆಜಿ ಬೆಳ್ಳಿ ದೇಣಿಗೆ ಬಂದಿದೆ. ಅಲ್ಲದೆ ಮಹಾಕುಂಭ ಮೇಳದ ಅವಧಿಯಲ್ಲಿ ಹೆಚ್ಚುವರಿಯಾಗಿ ೧.೫ ಕೆಜಿ ಚಿನ್ನ ಹಾಗೂ ೨೮ ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಇವುಗಳ ಪ್ರಸ್ತುತ ಸ್ಥಿತಿ ಮತ್ತು ದಾಸ್ತಾನು ದಾಖಲೆಗಳನ್ನು ಅಧಿಕಾರಿಗಳು ಕ್ರಾಸ್ ಚೆಕ್ ಮಾಡುತ್ತಿದ್ದಾರೆ.

ಈ ವಿವಾದಗಳು ತಾರಕಕ್ಕೇರುತ್ತಿದ್ದಂತೆ ಟ್ರಸ್ಟ್‌ನಲ್ಲಿ ದೊಡ್ಡ ಮಟ್ಟದ ಆಡಳಿತಾತ್ಮಕ ಬದಲಾವಣೆಗಳಾಗಿವೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಟ್ರಸ್ಟ್ ಇವರ ರಾಜೀನಾಮೆಯನ್ನು ಅಂಗೀಕರಿಸಿದೆ. ಸದ್ಯ ಕೃಷ್ಣ ಮೋಹನ್ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು, ಸಾರ್ವಜನಿಕರ ವಿಶ್ವಾಸವನ್ನು ಮರಳಿ ಗಳಿಸಲು ಪಾರದರ್ಶಕ ಆಡಳಿತ ವ್ಯವಸ್ಥೆ ತರಲು ಟ್ರಸ್ಟ್ ತೀರ್ಮಾನಿಸಿದೆ.

ಪ್ರಸ್ತುತ ನಡೆಯುತ್ತಿರುವುದು ಕೇವಲ ಹಣಕಾಸು ನಿಯಮಾವಳಿಗಳ ಪಾಲನೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವ ವಾಡಿಕೆಯ ಆಡಿಟ್ ಪ್ರಕ್ರಿಯೆಯಾಗಿದ್ದು, ವೆಚ್ಚದಲ್ಲಿ ಯಾವುದೇ ಅಕ್ರಮ ನಡೆದಿದೆ ಎಂಬ ಅಂತಿಮ ತೀರ್ಮಾನಕ್ಕೆ ಎಸ್‌ಐಟಿ ಇನ್ನು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಭಕ್ತರ ಕಾಣಿಕೆಗಳು ಸುರಕ್ಷಿತವಾಗಿವೆ ಎಂದು ಟ್ರಸ್ಟ್ ವಿಶ್ವಾಸ ವ್ಯಕ್ತಪಡಿಸಿದೆ.