Home ಜಿಲ್ಲೆ ಪರವಾನಗಿ ಭೂಮಾಪಕರ ಲಾಗಿನ್ ಬಂದ್: ಅನ್ನದಾತರ ನಿತ್ಯ ಪರದಾಟ : ನಾರಾಯಣ್ಣೊರ್ ಆಕ್ರೋಶ

ಪರವಾನಗಿ ಭೂಮಾಪಕರ ಲಾಗಿನ್ ಬಂದ್: ಅನ್ನದಾತರ ನಿತ್ಯ ಪರದಾಟ : ನಾರಾಯಣ್ಣೊರ್ ಆಕ್ರೋಶ

ಯಾದಗಿರಿ:ಮಾ.27: ಪರವಾನಗಿ ಭೂಮಾಪಕರಿಂದ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಲಾಗಿನ್ ಬಂದ್ ಪ್ರತಿಭಟನೆಯ ಪರಿಣಾಮವಾಗಿ ಜಿಲ್ಲೆಯ ರೈತರು ಭೂಸಂಬಂಧಿತ ಕಾರ್ಯಗಳಿಗೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿಯನ್ನು ತಕ್ಷಣ ಸರಿಪಡಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾರ್ಮಿಕ ಸೇನೆ ಜಿಲ್ಲಾಧ್ಯಕ್ಷ ಪೆÇೀಲಪ್ಪ ಎಂ. ನಾರಾಯಣ್ಣೊರ್ ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.

ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಭೂ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲಾ ಜಮೀನಿನ ವ್ಯವಹಾರಗಳು ಸಂಪೂರ್ಣವಾಗಿ ಲಾಗಿನ್ ವ್ಯವಸ್ಥೆಯ ಮೇಲೆ ಅವಲಂಬಿತವಾಗಿವೆ. ಆದರೆ, ಪರವಾನಗಿ ಭೂಮಾಪಕರ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಲಾಗಿನ್ ಸೇವೆ ಸ್ಥಗಿತಗೊಂಡಿದ್ದು, ಇದರ ನೇರ ಪರಿಣಾಮ ರೈತರ ಮೇಲೆ ಬಿದ್ದಿದೆ” ಎಂದು ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ಹಳ್ಳಿಗಳಿಂದ ದಿನಂಪ್ರತಿ ರೈತರು ತಮ್ಮ ಜಮೀನಿನ ದಾಖಲೆಗಳು, ಹಕ್ಕುಪತ್ರ, ಮ್ಯೂಟೇಷನ್ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಬಂದು, ಕೆಲಸಗಳಾಗದೆ ಬೇಸತ್ತು ಹಿಂತಿರುಗುತ್ತಿರುವುದು ಸಾಮಾನ್ಯವಾಗಿದೆ. ಭೀಕರ ಬಿಸಿಲನ್ನೂ ಲೆಕ್ಕಿಸದೆ ಓಡಾಡುತ್ತಿರುವ ರೈತರ ಪರದಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

“ಇಂತಹ ಪರಿಸ್ಥಿತಿಯಲ್ಲಿ ರೈತರು ಅನುಭವಿಸುತ್ತಿರುವ ತೊಂದರೆ ಅನ್ಯಾಯಕರವಾಗಿದೆ. ರೈತರ ತಿರುಗಾಟಕ್ಕೆ ತಕ್ಷಣ ಅಂತ್ಯವಾಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಒಂದು ವಾರದೊಳಗೆ ಲಾಗಿನ್ ಸೇವೆ ಪುನರಾರಂಭ ಮಾಡಬೇಕು” ಎಂದು ನಾರಾಯಣ್ಣೊರ್ ಒತ್ತಾಯಿಸಿದ್ದಾರೆ.

ಇಲ್ಲವಾದಲ್ಲಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದು, ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.