
ಅಫಜಲಪೂರ:ಏ.9: ತಾಲೂಕು ಕಾಂಗ್ರೆಸ್ ಪಾಳೆಯದಲ್ಲಿ ಒಳಜಗಳ ತೀವ್ರಗೊಂಡಿದ್ದು, ಕಾರ್ಯಕರ್ತರ ಅಸಮಾಧಾನ ಬಹಿರಂಗವಾಗಿದೆ. ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ, ಜೇ.ಎಂ. ಕೊರಬು ಹಾಗೂ ಶಾಸಕರ ಬೆಂಬಲಿಗರ ನಡುವೆ ಶೀತಲ ಸಮರ ಮುಂದುವರೆದಿದ್ದು, ಇದು ಇದೀಗ ಸಾರ್ವಜನಿಕವಾಗಿ ಸ್ಫೋಟಗೊಂಡಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಪೂಜಾರಿ ಅವರು ಸಮಸ್ಯೆಗಳನ್ನು ಸಮನ್ವಯಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪಕ್ಷದ ಹಿರಿಯ ನಾಯಕರು ಹಾಗೂ ನೆಲಮಟ್ಟದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸದೆ ಶಾಸಕರ ಸುಪುತ್ರ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ.
ಮಾಲೀಕಯ್ಯಾ ಗುತ್ತೇದಾರ ಹಾಗೂ ಮಕಬುಲ್ ಪಟೇಲ್ ಅವರ ಬಗ್ಗೆ ನೀಡಲಾದ ಹೇಳಿಕೆಗಳು ಪಕ್ಷದ ಒಳಗಟ್ಟಿನಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಅವುಗಳನ್ನು ಹಿಂಪಡೆಯಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ. ಜೇ ಎಂ ಕೊರಬು ಅವರಂತ ಹಿಂದುಳಿದ ವರ್ಗದ ನಾಯಕರಿಗೆ ಅವಮಾನವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಇದು ಸಾಮಾಜಿಕ ಸಮತೋಲನಕ್ಕೆ ಧಕ್ಕೆ ತರುತ್ತದೆ ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಅಹಿಂದ ನಾಯಕರ ಬೆಂಬಲವಿಲ್ಲದೆ ಮಾನ್ಯ ಶಾಸಕರು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರೂ. ಮತ್ತು
ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಮಾನ್ಯತೆ ಸಿಗುತ್ತಿಲ್ಲ, ಹುದ್ದೆಗಳ ಹಂಚಿಕೆಯಲ್ಲಿ ಪಕ್ಷಪಾತ ನಡೆಯುತ್ತಿದೆ ಎಂಬುದೂ ಕಾರ್ಯಕರ್ತರ ಮತ್ತೊಂದು ಆಕ್ರೋಶದ ವಿಷಯವಾಗಿದೆ. ಚುನಾವಣೆಯ ಸಮೀಪದಲ್ಲಿ ಇಂತಹ ಒಳಜಗಳಗಳು ಪಕ್ಷದ ಬಲವನ್ನು ಕುಗ್ಗಿಸುವ ಸಾಧ್ಯತೆ ಇದೆ ಎಂದು ಹಿರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಿತಿ ಇದೇ ರೀತಿಯಾಗಿ ಮುಂದುವರೆದರೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಅತೃಪ್ತ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಜಿಲ್ಲಾ ಮಟ್ಟದ ನಾಯಕರ ಗಮನಕ್ಕೂ ವಿಷಯವನ್ನು ತರಲಾಗುವುದು ಎಂದು ತಿಳಿಸಿದ್ದಾರೆ.
ಈ ವೇಳೆ ಜಮೀಲ್ ಗೌಂಡಿ, ವಿಜಯಕುಮಾರ್ ಪಾಟೀಲ್, ನಿಜಮುದ್ದಿನ್ ಜಮಾದಾರ್, ಲತೀಪ್ ಪಟೇಲ್, ಪ್ರಶಾಂತ್ ಮ್ಯಾಕೇರಿ, ಶರಣು ಮಂಗಳೂರ, ಬೀರಪ್ಪ ಪೂಜಾರಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.




















