
ಸಂಜೆ ವಾಣಿ ವಾರ್ತೆ,
ಜಮಖಂಡಿ:ಮಾ.೮: ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ವರ್ಷ ಏಪ್ರಿಲ್ ೨೦೨೫ರಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ರಾತ್ರಿ ವೇಳೆ ಹೊಲಗಳು ಹಾಗೂ ಗ್ರಾಮದ ಹೊರವಲಯಗಳಲ್ಲಿ ಚಿರತೆ ಸಂಚರಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಜನರು ಭಯಭೀತರಾಗಿದ್ದರು.
ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆಯನ್ನು ಪತ್ತೆಹಚ್ಚಲು ವಿಶೇಷ ಕ್ರಮಗಳನ್ನು ಕೈಗೊಂಡಿದ್ದರು. ಚಿರತೆಯನ್ನು ಸೆರೆಹಿಡಿಯಲು ಹಲವು ಸ್ಥಳಗಳಲ್ಲಿ ಬಲೆಗಳನ್ನು ಅಳವಡಿಸಲಾಗಿದ್ದು, ಅದರ ಚಲನವಲನವನ್ನು ಗಮನಿಸಲು ಸಿಸಿ ಕ್ಯಾಮರಾಗಳನ್ನೂ ಸ್ಥಾಪಿಸಲಾಗಿತ್ತು. ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು, ರಾತ್ರಿ ವೇಳೆ ಅನಾವಶ್ಯಕವಾಗಿ ಹೊರಗೆ ಓಡಾಡಬಾರದು ಹಾಗೂ ಪಶುಗಳನ್ನು ಸುರಕ್ಷಿತವಾಗಿ ಕಟ್ಟಿಹಾಕುವಂತೆ ಸಲಹೆ ನೀಡಿದ್ದರು.
ಆದರೆ ನಿನ್ನೆ ಕೆಡಿ ಜಂಬಗಿ ಗ್ರಾಮದ ಸುರೇಶ ಮಲಕನ್ನವರ ಅವರ ತೋಟದಲ್ಲಿ ಮತ್ತೆ ಚಿರತೆಯ ಚಲನವಲನಗಳು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು. ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೊನವನ್ನು ಅಳವಡಿಸಿದ್ದರು.
ಇಂದು ಅಳವಡಿಸಿದ ಬೊನದಲ್ಲಿ ಚಿರತೆ ಬಿದ್ದಿರುವುದು ದೃಢಪಟ್ಟಿದ್ದು, ಈ ಕುರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರದೀಪ ರಾಠೊಡ ಮಾಹಿತಿ ನೀಡಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡುವ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಕಿರಣ ದಾಸರೆಡ್ಡಿ,
ಉಪ ವಲಯ ಅರಣ್ಯಾಧಿಕಾರಿಗಳಾದ ಎ.ಬಿ. ಕುಂಬಾರ, ವಿನೋದ ಜೈನಾಪುರ, ಪ್ರವೀಣ್ ಆದಗೊಂಡ, ಗಸ್ತು ಅರಣ್ಯ ಪಾಲಕ ಪ್ರಕಾಶ ಕರವಾಳಿ ಹಾಗೂ ಅರಣ್ಯ ವಿಕ್ಷಕಿ ನಾಗವೆಣಿ ಹೊಸಮನಿ, ಶ್ರೀದೇವಿ ಕರೆಪ್ಪಗೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.























