
ಕುಮಟಾ, ಮೇ26: ಸರಸ್ವತಿ ಪಿ.ಯು ಕಾಲೇಜು ಕೇವಲ ಅಂಕಗಳಿಕೆಗೆ ಮಾತ್ರ ಶಿಕ್ಷಣ ನೀಡುವುದಿಲ್ಲ. ಬದುಕಿನ ಮೌಲ್ಯಗಳನ್ನು ಕಲಿಸುವ ಕಾರ್ಯ ಮಾಡುತ್ತಿದೆ. ನಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಸಂಸ್ಥೆಯು ಸದೃಢವಾಗಿ ಬೆಳೆಯಬಲ್ಲದು ಎಂಬುದಕ್ಕೆ ವಿಧಾತ್ರಿಯ ಸರಸ್ವತಿ ಪಿ.ಯು ಕಾಲೇಜು ಸಾಕ್ಷಿ ಎಂದು ಖ್ಯಾತ ವಾಗ್ಮಿ, ವೈದ್ಯ ಡಾ. ರಾಹುಲ ದೇವರಾಜ ಹೇಳಿದರು.
ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿ ಸಹಭಾಗಿತ್ವದ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಪ್ರಥಮ ಪಿ.ಯು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ `ಆರಂಭಮ್’ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಸೂಕ್ತ ವಾತಾವರಣದ ಅಗತ್ಯತೆಯನ್ನು ವಿವರಿಸಿದ ಅವರು, ಓದುವ ವಿದ್ಯಾರ್ಥಿ ಯಾವುದೇ ಶಾಲೆಗೆ ಹೋದರೂ ಓದುತ್ತಾನೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಗಿಡವೊಂದನ್ನು ಮರುಭೂಮಿಯಲ್ಲಿ ನೆಟ್ಟರೆ ಅದು ಬೆಳೆಯುವುದಿಲ್ಲ. ಉತ್ತಮ ಸಂಸ್ಕೃತಿಯ ಅರಿವು ಮತ್ತು ಸಂಸ್ಕಾರ ನೀಡುವ ಶಿಕ್ಷಣ ಸಂಸ್ಥೆಗೆ ಮಕ್ಕಳನ್ನು ಸೇರಿಸಿದರೆ ಮಾತ್ರ ಅವರ ಭವಿಷ್ಯ ಕಟ್ಟಿಕೊಡಲು ಸಾಧ್ಯ ಎಂದರು.
ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಸರಸ್ವತಿ ಪಿ.ಯು ಕಾಲೇಜು ಅಂಕಗಳ ಆಧಾರದ ಮೇಲೆ ಮಾತ್ರ ದಾಖಲಾತಿ ನೀಡದೇ, ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಲ್ಲಿಯೂ ಹೆಚ್ಚಿನ ಸಾಧನೆಗೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 40 ಶೇಕಡಾ ಅಂಕ ಪಡೆದ ವಿದ್ಯಾರ್ಥಿಯೂ 90 ಶೇಕಡಾ ಸಾಧನೆ ಮಾಡುವಂತೆ ರೂಪಿಸುವ ಕಾರ್ಯ ನಿಜಕ್ಕೂ ಸಾರ್ಥಕ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮುರಳೀಧರ ಪ್ರಭು, ಸಂಸ್ಥೆಯ ವತಿಯಿಂದ ಎಲ್ಲಾ ರೀತಿಯ ಅವಕಾಶ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ಆದರೆ ಮಕ್ಕಳು ಹಾಗೂ ಪಾಲಕರ ಸ್ಪಂದನೆಯೂ ಅಷ್ಟೇ ಮುಖ್ಯ ಎಂದರು.
ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಸಂಸ್ಥೆ ಹಾಗೂ ಉಪನ್ಯಾಸಕರ ಪರಿಚಯ ನೀಡಿ ಮಾತನಾಡಿ, ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಕಾರ್ಯ ಸಂಸ್ಥೆಯಲ್ಲಿ ನಡೆಯುತ್ತಿದೆ ಎಂದರು. ಉತ್ತರ ಕನ್ನಡದಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಗಳ ಕೌನ್ಸಿಲರ್ ನೇಮಕ ಮಾಡಲಾಗಿದೆ. ಶಿಸ್ತು ಕಾಪಾಡಲು ನಿವೃತ್ತ ಸೈನಿಕರನ್ನು ಸಂಸ್ಥೆಯೊಂದಿಗೆ ಜೋಡಿಸಲಾಗಿದೆ. ಯಾವುದೇ ಹಂತದ ವಿದ್ಯಾರ್ಥಿಗಳು ಬಂದರೂ ಅವರನ್ನು ಸಾಧಕರಾಗಿ ರೂಪಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷ ರಮೇಶ ಪ್ರಭು ಮಾತನಾಡಿ, ಶಿಕ್ಷಣದೊಂದಿಗೆ ಸಂಸ್ಕಾರ ನೀಡುವುದು ಅತ್ಯಂತ ಮುಖ್ಯ. ಈ ಹಂತದಲ್ಲಿ ಮಕ್ಕಳ ಭವಿಷ್ಯದ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸಿ ಮುನ್ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜಿ.ಎಸ್. ಹೆಗಡೆ ಕಣ್ಣಿ ಸ್ವಾಗತಿಸಿದರು. ಉಪನ್ಯಾಸಕರುಗಳಾದ ಪದ್ಮನಾಭ ಪ್ರಭು ಹಾಗೂ ಪ್ರಸನ್ನ ಹೆಗಡೆ ಶೈಕ್ಷಣಿಕ ಮುನ್ನೋಟ ನೀಡಿದರು. ನಿಶಾ ಬ್ರೀಟೋ ವಂದಿಸಿದರು. ಗಣೇಶ ಜೋಶಿ ಸಂಕೊಳ್ಳಿ ಕಾರ್ಯಕ್ರಮ ನಿರೂಪಿಸಿದರು.

























