
ಕಲಬುರಗಿ,ಜೂ 21: ತಾಲೂಕಿನ ನಂದಿಕೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಪವನಕುಮಾರ ಬಿ ವಳಕೇರಿ ಅವರು ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಂದಿಕೂರ ಗ್ರಾಮದ ತೋಟದಲ್ಲಿರುವ ಬಾವಿಯಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆವರೆಗೆ 2 ಗಂಟೆ ಕಾಲ ಜಲ ಯೋಗ ಕೈಗೊಂಡು ಯೋಗ ಆಸನಗಳನ್ನು ಪ್ರದರ್ಶನ ಮಾಡುವ ಮೂಲಕ 12 ನೇ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಯೋಗವನ್ನು ಸದಾ ಕೈಗೊಂಡು ಬರುತ್ತಿರುವ ಪವನಕುಮಾರ ವಳಕೇರಿ ಅವರು ತಮ್ಮ ಪುತ್ರನಿಗೂ ಹಾಗೂ ಸುತ್ತಮುತ್ತಲಿನ ಜನರಿಗೂ ಜಲಯೋಗ ಕಲಿಸಿದ್ದಾರೆ. ಜಲಯೋಗ ಮಾಡುವುದರಿಂದ ಆಗುವ ಲಾಭಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
“ಕಳೆದ 25 ವರ್ಷಗಳಿಂದ ಯೋಗಾಸನ ಮಾಡುತ್ತಾ ಬಂದಿದ್ದೇನೆ. ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಕೂಡ ಯೋಗಾಸನ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ವಿವಿಧ ಯೋಗಾಸನ ಕಲಿಸಲು ಪ್ರಯತ್ನ ಮಾಡುತ್ತಿದ್ದೇನೆ. ಪದ್ಮಾಸನ ಸೇರಿದಂತೆ ವಿವಿಧ ಬಗೆಯ ಜಲ ಯೋಗಾಸನವನ್ನು ನೀರು ಕುಡಿದಷ್ಟೇ ಅತ್ಯಂತ ಸುಲಭವಾಗಿ ಮತ್ತು ಸರಳವಾಗಿ ಮಾಡುತ್ತೇನೆ ಎಂದು ಹೇಳುತ್ತಾರೆ. ಜಲ ಯೋಗಾಸನದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಯಾವುದೇ ರೋಗರುಜಿನಗಳು ನಮ್ಮತ್ತ ಸುಳಿಯುವುದಿಲ್ಲ ಎಂದು ಪವನಕುಮಾರ ಬಿ ವಳಕೇರಿ ಹೇಳುತ್ತಾರೆ.


























