
ಇಸ್ಲಾಮಾಬಾದ್.ಏ೨೫:ಅಮೆರಿಕದೊಂದಿಗೆ ನಡೆಯಲಿರುವ ಮಹತ್ವದ ಮಾತುಕತೆಗಳ ನಡುವೆ, ಇರಾನ್ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ನೇರವಾಗಿ ಅಮೆರಿಕದೊಂದಿಗೆ ಸಂಭಾಷಣೆ ನಡೆಸುವುದಿಲ್ಲವೆಂದು ತಿಳಿಸಿದೆ. ಈ ನಡುವೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ಪ್ರತಿನಿಧಿ ಮಂಡಳಿ ಶನಿವಾರ ಬೆಳಗಿನ ಜಾವ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಆಗಮಿಸಿದೆ.
ಇರಾನ್ ಪ್ರತಿನಿಧಿ ಮಂಡಳಿಯನ್ನು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಹಾಗೂ ಸೇನಾ ಮುಖ್ಯಸ್ಥ ಆಸಿಂ ಮುನೀರ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಒಳಾಂಗಣ ಸಚಿವ ಮೊಹ್ಸಿನ್ ನಕ್ವಿ ಕೂಡ ಉಪಸ್ಥಿತರಿದ್ದರು.ಪಾಕಿಸ್ತಾನ ಸರ್ಕಾರದ ಪ್ರಕಾರ, ಅರಾಘ್ಚಿ ಅವರು ದೇಶದ ಉನ್ನತ ನಾಯಕರೊಂದಿಗೆ ಪ್ರಾದೇಶಿಕ ಶಾಂತಿ, ಭದ್ರತೆ ಹಾಗೂ ಇತ್ತೀಚಿನ ಭೌಗೋಳಿಕ-ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.
ಅಮೆರಿಕದ ಪ್ರತಿನಿಧಿ ತಂಡವೂ ಆಗಮನ
ಇದಕ್ಕೂ ಮಧ್ಯೆ, ಅಮೆರಿಕದ ಪ್ರತಿನಿಧಿ ಮಂಡಳಿಯೂ ಇಸ್ಲಾಮಾಬಾದ್‌ಗೆ ಆಗಮಿಸುತ್ತಿದ್ದು, ಅದರಲ್ಲಿ ಸ್ಟೀವ್ ವಿಟ್‌ಕಾಫ್ ಹಾಗೂ ಜಾರೆಡ್ ಕುಶ್ನರ್ ಪ್ರಮುಖರಾಗಿದ್ದಾರೆ. ವೈಟ್ ಹೌಸ್ ಪ್ರಕಾರ, ಈ ಬಾರಿ ಉಪಾಧ್ಯಕ್ಷ ಜೆಡಿ ವೆನ್ಸ್ ಭಾಗವಹಿಸುವುದಿಲ್ಲ. ಆದರೆ ಅಗತ್ಯವಿದ್ದಲ್ಲಿ ಅವರು ತಕ್ಷಣ ಪಾಕಿಸ್ತಾನಕ್ಕೆ ತೆರಳಲು ಸಿದ್ಧರಾಗಿದ್ದಾರೆ.ವೈಟ್ ಹೌಸ್ ವಕ್ತಾರೆ ಕರೋಲಿನ್ ಲೀವಿಟ್ ಹೇಳುವಂತೆ, ಇರಾನ್ ಪಕ್ಷವೇ ಈ ಮುಖಾಮುಖಿ ಸಂಭಾಷಣೆಗೆ ಮುಂದಾಗಿದ್ದು, ಈ ಮಾತುಕತೆಗಳು ಒಪ್ಪಂದದತ್ತ ಸಾಗಲು ನೆರವಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಇರಾನ್ ರಾಜ್ಯ ಮಾಧ್ಯಮಗಳ ವರದಿ ಪ್ರಕಾರ, ಅರಾಘ್ಚಿ ಅವರು ಅಮೆರಿಕದ ಪ್ರತಿನಿಧಿಗಳೊಂದಿಗೆ ನೇರವಾಗಿ ಭೇಟಿಯಾಗುವ ಯಾವುದೇ ಯೋಜನೆ ಹೊಂದಿಲ್ಲ. ಪಾಕಿಸ್ತಾನವೇ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿ, ಇರಾನ್‌ನ ಪ್ರಸ್ತಾಪಗಳನ್ನು ಅಮೆರಿಕಕ್ಕೆ ತಲುಪಿಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ನಡೆದ ಮಾತುಕತೆಗಳಲ್ಲಿಯೂ ಇದೇ ಮಾದರಿ ಅನುಸರಿಸಲಾಗಿತ್ತು.
ಇದೇ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಕಠಿಣ ನಿಲುವು ಮುಂದುವರಿಸಿದ್ದು, ಅದರ ಸೈನಿಕ ಸಾಮರ್ಥ್ಯ ಕುಗ್ಗಿದೆಯೆಂದು ಹಾಗೂ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಹೇಳಿದ್ದಾರೆ. ಇರಾನ್ ತನ್ನ ಅಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ನೌಕಾ ನಿರ್ಬಂಧ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದೊಂದಿಗೆ ನಡೆಯುವ ಈ ಮಹತ್ವದ ಮಾತುಕತೆಗಳ ಬಳಿಕ, ಅರಾಘ್ಚಿ ಅವರು ಒಮಾನ್ ಹಾಗೂ ರಷ್ಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ ೨೮ರಿಂದ ಆರಂಭವಾದ ಅಮೆರಿಕಾ?ಇಸ್ರೇಲ್ ಸಂಬಂಧಿತ ಸಂಘರ್ಷದ ಕುರಿತು ಅವರು ಮುಂದಿನ ಚರ್ಚೆಗಳನ್ನು ನಡೆಸುವ ಸಾಧ್ಯತೆ ಇದೆ.
ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ, ಪಾಕಿಸ್ತಾನ ಮಧ್ಯವರ್ತಿಯಾಗಿ ಪ್ರಮುಖ ಪಾತ್ರವಹಿಸಿರುವುದು ಗಮನಾರ್ಹ. ನೇರ ಮಾತುಕತೆಗಳಿಲ್ಲದೆ ಪರೋಕ್ಷ ಸಂಭಾಷಣೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಮುಂದುವರಿದಿವೆ.
ಮಾತುಕತೆ ನಿಗದಿಯಿಲ್ಲ
ವಿದೇಶಾಂಗ ಸಚಿವ ಅಬ್ಬಾಸ್ ಅರಾಫ್ಟಿ ನೇತೃತ್ವದ ಇರಾನ್ ನಿಯೋಗವು ನಿನ್ನೆ ತಡ ರಾತ್ರಿ ಇಸ್ಲಾಮಾಬಾದ್‌ಗೆ ಬಂದಿಳಿದಿದೆ. ಇರಾನ್ ಸರ್ಕಾರದ ವಕ್ತಾರ ಇಸ್ಮಾಯಿಲ್ ಬುಕಾಯ್ ಹಾಗೂ ಇತರರು ನಿಯೋಗದಲ್ಲಿದ್ದಾರೆ.
ಅರಾಫ್ಟಿ ನೇತೃತ್ವದ ನಿಯೋಗವು ಇಸ್ಲಾಮಾಬಾದ್‌ಗೆ ಭೇಟಿ ನೀಡಿದೆ. ಆದರೆ, ಅಮೆರಿಕದೊಂದಿಗೆ ಯಾವುದೇ ಮಾತುಕತೆಗಳು ನಿಗದಿಯಾಗಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯವು ಸ್ಪಷ್ಟಪಡಿಸಿದೆ.
ಪ್ರಾದೇಶಿಕ ಶಾಂತಿಯನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನದ ನಾಯಕರೊಂದಿಗೆ ಮಾತುಕತೆ ನಡೆಸಲು ಅಬ್ಬಾಸ್ ಅರಾಫ್ಟಿ ನೇತೃತ್ವದ ನಿಯೋಗವು ಇಸ್ಲಾಮಾಬಾದ್‌ಗೆ ಆಗಮಿಸಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಕಾಯ್ ಹೇಳಿದ್ದಾರೆ. ಈ ಭೇಟಿಯ ಸಮಯದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಯಾವುದೇ ನೇರ ಸಭೆಗಳು ನಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ನಾವು ಅಧಿಕೃತ ಭೇಟಿಗಾಗಿ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಆಗಮಿಸಿದ್ದೇವೆ. ಅಮೆರಿಕ ಹೇರಿರುವ ಆಕ್ರಮಣಕಾರಿ ಯುದ್ಧವನ್ನು ಕೊನೆಗೊಳಿಸಲು ಮತ್ತು ನಮ್ಮ ಪ್ರದೇಶದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಪಾಕಿಸ್ತಾನ ನಡೆಸುತ್ತಿರುವ ಮಧ್ಯಸ್ಥಿಕೆ ಪ್ರಯತ್ನಗಳಿಗೆ ಪೂರಕವಾಗಿ ವಿದೇಶಾಂಗ ಸಚಿವ ಅರಾಫ್ಟಿ ಅವರು ಪಾಕ್ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ’ ಎಂದು ಬಕಾಯ್ ’ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

























