
ಬೆಂಗಳೂರು,ಅ.22- ಸೈಬರ್ ವಂಚನೆಗಳಿಗೆ ಬಳಸಲಾಗುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ಜಾಲವನ್ನು ಕರ್ನಾಟಕ ಸೈಬರ್ ಕಮಾಂಡ್ ಪೊಲೀಸರು ಹಾಗೂ ದೂರಸಂಪರ್ಕ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ.
ನಗರದ ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಜಾಲಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಕಾಡುಗೋಡಿ ಹಾಗೂ ಪಟ್ಟಂದೂರು ಅಗ್ರಹಾರ ಪ್ರದೇಶಗಳಲ್ಲಿ ಅಕ್ರಮ ಸಿಮ್ ಬಾಕ್ಸ್ಗಳನ್ನು ಅಳವಡಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ.
ಕಾಡುಗೋಡಿಯ ಅಪಾರ್ಟ್ಮೆಂಟ್ನಲ್ಲಿ ತಲಾ 192 ಸಿಮ್ಗಳ ಸಾಮರ್ಥ್ಯ ಹೊಂದಿರುವ ಆರು ಸಿಮ್ ಬಾಕ್ಸ್ಗಳನ್ನು ಪತ್ತೆಹಚ್ಚಲಾಗಿದೆ. ಇನ್ನು ಪಟ್ಟಂದೂರು ಅಗ್ರಹಾರದಲ್ಲಿ ನಾಲ್ಕು ಸಿಮ್ ಬಾಕ್ಸ್ಗಳು ಹಾಗೂ 128 ಸಿಮ್ಗಳ ಸಾಮರ್ಥ್ಯದ ವ್ಯವಸ್ಥೆ ಪತ್ತೆಯಾಗಿದೆ.
ಎರಡೂ ಸ್ಥಳಗಳಲ್ಲಿ ಒಟ್ಟು 10 ಸಿಮ್ ಬಾಕ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಅಕ್ರಮ ಜಾಲದ ಕಾರ್ಯಾಚರಣೆಗೆ ಏರ್ಟೆಲ್ ಕಂಪನಿಯ ಸಿಮ್ ಕಾರ್ಡ್ಗಳನ್ನು ಅನಧಿಕೃತವಾಗಿ ಬಳಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಸಿಮ್ ಬಾಕ್ಸ್ ದಂಧೆ:
ಸಿಮ್ ಬಾಕ್ಸ್ ಎನ್ನುವುದು ದೂರಸಂಪರ್ಕ ವ್ಯವಸ್ಥೆಯಾಗಿದ್ದು, ಇದರ ಮೂಲಕ ಅಂತಾರಾಷ್ಟ್ರೀಯ ಕರೆಗಳನ್ನು ಇಂಟರ್ನೆಟ್ ಆಧಾರಿತ ಸಂಪರ್ಕದ ಮೂಲಕ ಸ್ವೀಕರಿಸಿ, ಸ್ಥಳೀಯ ಮೊಬೈಲ್ ಕರೆಗಳ ರೂಪದಲ್ಲಿ ವರ್ಗಾಯಿಸಲಾಗುತ್ತದೆ. ಇಂತಹ ವ್ಯವಸ್ಥೆಯನ್ನು ಕಾನೂನುಬಾಹಿರವಾಗಿ ಬಳಸಿದಾಗ, ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳೆಂದು ಬಿಂಬಿಸಿ ದೂರಸಂಪರ್ಕ ನಿಯಮಗಳನ್ನು ಉಲ್ಲಂಘಿಸುವ ಸಾಧ್ಯತೆಯಿರುತ್ತದೆ.
ವಂಚನೆಗೂ ಸಂಪರ್ಕದ ಶಂಕೆ:
ಈ ಅಕ್ರಮ ಸಿಮ್ ಬಾಕ್ಸ್ ಜಾಲಕ್ಕೆ ಡಿಜಿಟಲ್ ಅರೆಸ್ಟ್ ವಂಚನೆ, ಸೆಕ್ಸ್ಟಾರ್ಷನ್ ಹಾಗೂ ದೇಶದ ವಿವಿಧೆಡೆ ನಡೆಯುತ್ತಿರುವ ಸೈಬರ್ ಹಣಕಾಸು ವಂಚನೆಗಳೊಂದಿಗೆ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದೆ.
ಈ ಜಾಲದ ಮೂಲಕ ನೂರಾರು ಕೋಟಿ ರೂಪಾಯಿ ಮೌಲ್ಯದ ಹಣಕಾಸು ವಂಚನೆ ನಡೆದಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ವಂಚನೆಯ ನಿಖರ ಪ್ರಮಾಣ ಹಾಗೂ ಜಾಲದ ಕಾರ್ಯಾಚರಣೆಯ ಸಂಪೂರ್ಣ ವಿವರಗಳು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಮಹಾರಾಷ್ಟ್ರದಿಂದ ಪೂರೈಕೆ:
ತನಿಖೆಯ ವೇಳೆ ಮಹಾರಾಷ್ಟ್ರದ ತಿರೋಡಾ ಪ್ರದೇಶದಲ್ಲಿ ಸಿಮ್ ಕಾರ್ಡ್ಗಳನ್ನು ಖರೀದಿಸಿ, ಅವುಗಳನ್ನು ಇ-ಸಿಮ್ಗಳಾಗಿ ಪರಿವರ್ತಿಸಿ ಪೂರೈಕೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ
ಅಕ್ರಮ ಸಿಮ್ ಬಾಕ್ಸ್ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ, ಸಿಮ್ ಕಾರ್ಡ್ಗಳನ್ನು ಪೂರೈಸುತ್ತಿದ್ದವರು ಯಾರು ಹಾಗೂ ಈ ಜಾಲದ ಮೂಲಕ ಎಷ್ಟು ಪ್ರಮಾಣದ ಸೈಬರ್ ವಂಚನೆ ನಡೆದಿದೆ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸೈಬರ್ ಅಪರಾಧಗಳಿಗೆ ಈ ಜಾಲವನ್ನು ಬಳಸಲಾಗಿದೆಯೇ ಎಂಬುದರ ಜೊತೆಗೆ, ವಂಚನೆಯ ಹಣಕಾಸು ವಹಿವಾಟು ಮತ್ತು ಇತರ ಸಂಪರ್ಕಗಳ ಬಗ್ಗೆಯೂ ತನಿಖಾಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
























