
ಸಂಜೆವಾಣಿ ವಾರ್ತೆ
ಸುರಪುರ : ಮಾ.೧೨:ಸಮಯ ಮತ್ತು ಶ್ರಮದ ಜೊತೆ ಹೆಜ್ಜೆ ಹಾಕಿದವರು, ಗುರು – ಹಿರಿಯರ ಮಾತುಗಳನ್ನು ಪಾಲಿಸಿದವರು, ಸದಾ ಪ್ರಯತ್ನಶೀಲರಾದವರು, ಜೀವನದಲ್ಲಿ ಸೋತ ಉದಾಹರಣೆಗಳಿಲ್ಲ ಎಂದು ನಿವೃತ್ತ ಶಿಕ್ಷಕ ,ಸಾಹಿತಿ ಅಶೋಕ ಚೌಧರಿ ಅಭಿಪ್ರಾಯಪಟ್ಟರು.
ತಾಲೂಕಿನ ದೇವರ ಗೋನಾಲದ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ. ಜ್ಯೋತಿ ಪ್ರಜ್ವಲನೆ ಮಾಡಿ ಮಾತನಾಡಿ “ವಿದ್ಯಾರ್ಥಿ ಜೀವನ ಹುಡುಗಾಟವಲ್ಲ, ಅದು ಜ್ಞಾನದ ಹುಡುಕಾಟ.” ಸಮಯ ಮತ್ತು ಶ್ರಮವು ನಿಮ್ಮದಿರುವಾಗ, ಸಾಧಿಸುವ ಛಲದೊಂದಿಗೆ ಮುನ್ನಡೆದರೆ, ಪ್ರತಿಫಲವೂ ನಿಮ್ಮದಾಗಿರುವುದು. ಲಕ್ಷವಹಿಸಿ ಓದುವುದರಿಂದ, ಪೋಷಕರ ಲಕ್ಷ-ಲಕ್ಷ ರೂಪಾಯಿಗಳನ್ನು ಉಳಿಸಬಹುದು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಪ್ರವೇಶ ಪಡೆಯಬಹುದು. “ಸತತ ಅಭ್ಯಾಸಿ ಸದಾ ಸುಖಿಯಾಗಿರುತ್ತಾನೆ.” ಗುರಿಯನ್ನು ತಲುಪುವ ತನಕ ವಿಶ್ರಮಿಸದಿರುವವನೇ ನಿಜ ಸಾಧಕ ಎನ್ನಿಸಿಕೊಳ್ಳುತ್ತಾನೆ. ಸರಕಾರವು ಮಕ್ಕಳ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಲಿದೆ. ಮಕ್ಕಳಿಗೆ ಪುಕ್ಕಟೆಯಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಸೌಲಭ್ಯಗಳನ್ನು ಜಾರಿಗೆ ತರುತ್ತಲಿದೆ. ಅದರ ಸಂಪೂರ್ಣ ಸದ್ಬಳಕೆಯನ್ನು ವಿದ್ಯಾರ್ಥಿಗಳು ಸಕ್ರೀಯವಾಗಿ ಬಳಸಿಕೊಳ್ಳಬೇಕು. ದಿನನಿತ್ಯದ ಅಭ್ಯಾಸವನ್ನು, ಅಂದೇ ಮಾಡುತ್ತಿದ್ದರೆ, “ಹತ್ತಿರ ಭಯ ಹತ್ತಿರ ಸುಳಿಯದು.” ಗಾಂಧೀಜಿ, ಸುಭಾಶ್ಚಂದ್ರ ಬೋಸ್, ಡಾ.ಬಿ.ಆರ್.ಅಂಬೇಡ್ಕರ್, ಶಾಸ್ತ್ರೀಜಿ, ಬಚೇಂದ್ರಿಪಾಲ್, ಮುಂತಾದವರು ಕಷ್ಟಪಟ್ಟು ಓದಿ ಸಾಧಕರಾದವರು. ಅವರೆಲ್ಲರೂ ನಮ್ಮ-ನಿಮ್ಮೆಲ್ಲರಿಗೂ ಪ್ರೇರಣೆಯಾಗಲಿ. ವಿದ್ಯಾರ್ಥಿ ಜೀವನ ಸಾರ್ಥಕಪಡಿಸಿಕೊಳ್ಳಿ. ಪರೀಕ್ಷೆಯಲ್ಲಿ ಉತ್ತಮ ಅಂಕದೊAದಿಗೆ ನಗೆಯನ್ನು ಬೀರುವ ಮಕ್ಕಳು ನೀವಾಗಿರೆಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಎ. ಎಲ್. ಕಡೆಮನಿ ವಹಿಸಿದ್ದರು. ವೇದಿಕೆಯ ಮೇಲೆ ಮುಖ್ಯ ಅತಿಥಿ ಸ್ಥಾನದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ, ಚಾಂದಬಾಷಾ, ಮಾಜಿ ಅಧ್ಯಕ್ಷರಾದ, ಸಣ್ಣ ದೇಸಾಯಿ ದೇವರಗೋನಾಲ, ಹಿರಿಯ ಶಿಕ್ಷಕರಾದ, ಬಸವಂತರಾಯ ಕೆರಿಕೋಡಿ, ಎಸ್.ಡಿ.ಎಂ.ಸಿ ಸದಸ್ಯರಾದ ತೋಟಪ್ಪ ತೋಟಪ್ಪನವರ, ಊರಿನ ಪ್ರಮುಖರಾದ, ಪೂಜಾರಿ, ಶಾಲೆಯ ಶಿಕ್ಷಕ – ಸಿಬ್ಬಂದಿ ವರ್ಗದವರವರು , ಊರಿನ ಪ್ರಮುಖರು, ಪೋಷಕರು, ಮತ್ತು ಮಕ್ಕಳು ಉಪಸ್ಥಿತರಿದ್ದರು.
ಶಿಕ್ಷಕರಾದ ಶೇಖನಾಥ ನಿರೂಪಿಸಿದರು, ಶಿಕ್ಷಕರಾದ ಸುಭಾನಿ ಸ್ವಾಗತಿಸಿದರು. ಮಾಲಾಶ್ರೀ ಪ್ರಾರ್ಥಿಸಿದರು. ದೇವಣ್ಣ ಶಿಕ್ಷಕರು ವಂದಿಸಿದರು.






















