
ಹುಣಸಗಿ:ಮಾ.೧೨: ಒಳಮೀಸಲಾತಿ ಜಾರಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾದಿಗ ಸಮುದಾಯದ ವಿವಿಧ ಸಂಘಟನೆಗಳು ನೀಡಿದ್ದ ಬಂದ್ ಕರೆ ಹಿನ್ನೆಲೆಯಲ್ಲಿ ಹುಣಸಗಿ ಪಟ್ಟಣದಲ್ಲಿ ನಡೆದ ಬಂದ್ ಭರ್ಜರಿ ಯಶಸ್ಸು ಕಂಡಿತು. ಜನಸಾಮಾನ್ಯರು, ವ್ಯಾಪಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಿದ ಪರಿಣಾಮ ಪಟ್ಟಣದ ಬಹುತೇಕ ಅಂಗಡಿ-ಮಳಿಗೆಗಳು ಮುಚ್ಚಲ್ಪಟ್ಟು ಸಾರಿಗೆ ಸಂಚಾರ ಕೂಡ ಕೆಲಕಾಲ ಸಂಪೂರ್ಣ ಸ್ಥಗಿತಗೊಂಡಿತ್ತು.
ಬAದ್ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದ್ದು, ಕೆಲವು ಕಡೆ ವಾಹನಗಳು ಸರತಿ ಸಾಲಿನಲ್ಲಿ ನಿಂತು ಸಂಚಾರಕ್ಕೆ ತೊಂದರೆ ಉಂಟಾದ ದೃಶ್ಯ ಕಂಡುಬAದಿತು. ಆದಾಗ್ಯೂ ಔಷಧಿ ಅಂಗಡಿಗಳು ಹಾಗೂ ತುರ್ತು ಸೇವೆಗಳು ಮಾತ್ರ ಎಂದಿನAತೆ ಕಾರ್ಯನಿರ್ವಹಿಸುತ್ತಿದ್ದವು.
ಪ್ರತಿಭಟನೆಯ ಅಂಗವಾಗಿ ಮಾದಿಗ ಸಮುದಾಯದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಮಹಾಂತಸ್ವಾಮಿ ವೃತ್ತದಲ್ಲಿ ಜಮಾಯಿಸಿ ತಮಟೆ ಸದ್ದಿನ ನಡುವೆ ವೀರರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ಡಾ. ಬಾಬು ಜಗಜೀವನರಾಂ ವೃತ್ತದವರೆಗೆ ಭಾರೀ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಒಳಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಮಾಜದ ಮುಖಂಡ ಹಾಗೂ ನ್ಯಾಯವಾದಿ ನಂದಕುಮಾರ ಬಾಂಬೆಕರ್, ಮಾದಿಗ ಸಮುದಾಯವು ಹಲವು ವರ್ಷಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದು, ಸಮುದಾಯಕ್ಕೆ ಸಲ್ಲಬೇಕಾದ ಒಳಮೀಸಲಾತಿ ಹಕ್ಕು ಇನ್ನೂ ಜಾರಿಗೆ ಬಾರದಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಹೇಳಿದರು. ಸಂವಿಧಾನದ ಆಶಯದಂತೆ ಸಮುದಾಯಗಳಿಗೆ ಸಮಾನ ಅವಕಾಶಗಳು ದೊರೆಯಬೇಕು. ಜನಸಂಖ್ಯೆ ಅನುಪಾತದ ಆಧಾರದ ಮೇಲೆ ಮಾದಿಗ ಸಮುದಾಯಕ್ಕೆ ಶೇ.೬ರಷ್ಟು ಮೀಸಲಾತಿ ಸಿಗುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಯುವ ಮುಖಂಡ ಬಸವರಾಜ್ ಕಾಮನಟಗಿ ಮಾತನಾಡಿ, ಒಳಮೀಸಲಾತಿ ಜಾರಿಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಜೊತೆಗೆ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ.೧ರಷ್ಟು ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಅಂಬ್ಲಪ್ಪ ಹಳ್ಳಿಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಎಸ್ಸಿಗೆ ಶೇ.೧೭ ಮತ್ತು ಎಸ್ಟಿಗೆ ಶೇ.೭ ಮೀಸಲಾತಿ ಇರುವ ಹಿನ್ನೆಲೆಯಲ್ಲಿ ಅದರೊಳಗೆ ಒಳಮೀಸಲಾತಿ ಜಾರಿಗೆ ಯಾವುದೇ ಅಡ್ಡಿಯಿಲ್ಲ. ಆದರೂ ಕಾನೂನು ತೊಡಕು ಎಂಬ ನೆಪ ಹೇಳಿ ಸರ್ಕಾರ ವಿಳಂಬ ಮಾಡುತ್ತಿರುವುದು ಸಮುದಾಯದ ಮೇಲೆ ನಡೆಯುತ್ತಿರುವ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
ಮಾದಿಗ ಸಮುದಾಯದ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮಾ.೨೭ರೊಳಗೆ ಒಳಮೀಸಲಾತಿ ಜಾರಿಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಮತ್ತಷ್ಟು ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.
ನಂತರ ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಎಂ. ಬಸವರಾಜ್ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆ ವೇಳೆ ಸಿಪಿಐ ರವಿಕುಮಾರ್ ಹಾಗೂ ಪಿಎಸ್‌ಐ ರಾಹುಲ್ ಪವಾಡೆಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಶಾಂತಿಯುತವಾಗಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ತಿಪ್ಪಣ್ಣ ಕಡಿಮನಿ, ಮಾನಪ್ಪ ಕಟ್ಟಿಮನಿ, ಶಿವಪ್ಪ ಸದಬ, ನಂದಪ್ಪ ಪೀರಾಪುರ, ಮಲ್ಲಣ್ಣ ದೊಡ್ಡಮನಿ ವಜ್ಜಲ್, ಶಾಂತಪ್ಪ ಹಗರಟಗಿ, ಬಸವರಾಜ್ ದೊಡ್ಡಮನಿ ಕೊಡೇಕಲ್, ಸಿದ್ದು ಮೇಲಿನಮನಿ, ಮಹಾಂತೇಶ ದೊಡ್ಡಮನಿ, ನಾಗರಾಜ್ ಕೊಡೇಕಲ್, ಪವಾಡೆಪ್ಪ ಮ್ಯಾಗೇರಿ, ಸಂಗಣ್ಣ ಅಗ್ನಿ, ಹುಲಗಪ್ಪ ಬೈಲಕುಂಟಿ, ದೇವಪ್ಪ ಮಂಜಲಾಪುರ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.






















