
ಚಿತ್ತಾಪುರ; ಮಾ.5:ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಂಗು ರಂಗಿನ ಹಬ್ಬ ಹೋಳಿಯನ್ನು ಪರಸ್ಪರ ಬಣ್ಣ ಹಚ್ಚಿ ಶುಭಾಶಯಗಳನ್ನು ಕೋರುವುದರ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.
ಯುವಕ, ಯುವತಿಯರು ತಮ್ಮ ಸ್ನೇಹಿತರು, ಸಂಬಂಧಿಕರೊಂದಿಗೆ ಹಾಡುಗಳಿಗೆ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು.
ನಂತರ ನಂದಿ ಭಾವಿ, ಕಾಗಿಣಾ ನದಿ ಸೇರಿದಂತೆ ಇತರೆಡೆ ಸ್ನಾನ ಮಾಡುವ ಮೂಲಕ ಸಡಗರದಿಂದ ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ಯುವಕರ ಗುಂಪುಗಳು ವಿವಿಧೆಡೆಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿದ್ದರು. ದಾರಿ ಹೋಕರು ಹಾಗೂ ಬೈಕ್ನಲ್ಲಿ ಸಾಗುತ್ತಿದ್ದವರಿಗೆ ಹುಡುಗರು ಬಣ್ಣ ಹಚ್ಚಿ ಹ್ಯಾಪಿ ಹೋಳಿ ಎನ್ನುತ್ತಾ ಶುಭಾಶಯಗಳನ್ನು ಹಂಚಿದರು. ಹಿರಿಯರು, ಕಿರಿಯರು ಎನ್ನದೇ ಎಲ್ಲ ಜಾತಿ ಜನಾಂಗದವರು ಸೇರಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದು ಕಂಡುಬಂತು.
ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು ನಗರದ ವಿವಿಧ ರಸ್ತೆಗಳಲ್ಲಿ, ಓಣಿಗಳಲ್ಲಿ ಯುವಕರು, ಯುವತಿಯರು ಡಿ.ಜೆ. ವ್ಯವಸ್ಥೆ ಮಾಡಿಕೊಂಡು ರಂಗಿನಾಟ ಆಡಿದರು.






















