Home ಜಿಲ್ಲೆ ಕಲಬುರಗಿ ನ. 1ರಂದು ಪ್ರತ್ಯೇಕ ಕಲ್ಯಾಣ ಕರ್ನಾಟಕ ಧ್ವಜಾರೋಹಣ

ನ. 1ರಂದು ಪ್ರತ್ಯೇಕ ಕಲ್ಯಾಣ ಕರ್ನಾಟಕ ಧ್ವಜಾರೋಹಣ

ಕಲಬುರಗಿ,ಅ.29: ಕಲ್ಯಾಣ ಕರ್ನಾಟಕದ ದಶಕಗಳ ಹಿಂದುಳಿತನಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಂವಿಧಾನದ ವಿಧಿ 371(ಜೆ) ಜಾರಿಗೊಳಿಸಿದರೂ, ಶಿಕ್ಷಣ, ಆರೋಗ್ಯ, ಉದ್ಯೋಗ, ನೀರಾವರಿ, ಕುಡಿಯುವ ನೀರು, ಕೈಗಾರಿಕೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಈ ಪ್ರದೇಶದ ಸಮಸ್ಯೆಗಳು ಸಂಪೂರ್ಣವಾಗಿ ಪರಿಹಾರಗೊಂಡಿಲ್ಲ. ಹೀಗಾಗಿ ವಿಶೇಷ ಸ್ಥಾನಮಾನ ಮತ್ತು ಅಭಿವೃದ್ಧಿ ಮಂಡಳಿಯ ವ್ಯವಸ್ಥೆಗಳಾಚೆಗೆ ಹೋಗಿ, ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯವನ್ನು ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಮುಂದಿಟ್ಟಿದೆ.
ಎಂ.ಎಸ್. ಪಾಟೀಲ್ ನರಿಬೋಳ್ ಅವರ ನೇತೃತ್ವದಲ್ಲಿ, ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ 1 ರಂದು ಪ್ರತ್ಯೇಕ ಕಲ್ಯಾಣ ಕರ್ನಾಟಕ ಧ್ವಜಾರೋಹಣ ನಡೆಸಿ, ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಜನತಾಂತ್ರಿಕ ಮತ್ತು ಸಂವಿಧಾನಬದ್ಧ ಮಾರ್ಗದಲ್ಲಿ ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಗಿದೆ.
ಈ ಧ್ವಜಾರೋಹಣವು ಕೇವಲ ಸಾಂಕೇತಿಕ ಕಾರ್ಯಕ್ರಮವಲ್ಲ; ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಪ್ರಾದೇಶಿಕ ನ್ಯಾಯ, ಸಮಾನ ಅವಕಾಶ ಮತ್ತು ಸ್ವಯಂ ಆಡಳಿತದ ಬೇಡಿಕೆಯನ್ನು ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ತರುವ ಪ್ರಯತ್ನವಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ , ಮಹಾಪ್ರಧಾನ ಕಾರ್ಯದರ್ಶಿವಿನೋದ ಕುಮಾರ ಜನೆವರಿ ತಿಳಿಸಿದ್ದಾರೆ.