
ಸೈದಾಪುರ:ಮಾ.21:ಆರ್ಥಿಕ ಹೊರೆಯಿಲ್ಲದೆ ಗುಣಮಟ್ಟದ ಚಿಕಿತ್ಸೆ, ತಜ್ಞ ವೈದ್ಯರ ಸಮಾಲೋಚನೆ ಮತ್ತು ಕಾಯಿಲೆಗಳ ಮುನ್ನೆಚ್ಚರಿಕೆ ಮಾಹಿತಿಯನ್ನು ತಲುಪಿಸಿ ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮಿಗಳು ತಿಳಿಸಿದರು.
ಸಮೀಪದ ಬದ್ದೇಪಲ್ಲಿ ಗ್ರಾಮದಲ್ಲಿ ಹೊಂಗಿರಣ ಚಾರಿಟೇಬಲ್ ಟ್ರಸ್ಟ್, ವೇದಾ ಚಾರಿಟೇಬಲ್ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಯಾದಗಿರಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ, ಕನ್ನಡಕ ವಿತರಣಾ ಬೃಹತ್ ಶಿಬಿರದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಈ ಶಿಬಿರಗಳು ವಿಶೇಷವಾಗಿ ಆರಂಭಿಕ ರೋಗ ಪತ್ತೆ, ಉಚಿತ ಔಷಧ ವಿತರಣೆ ಮತ್ತು ದೀರ್ಘಕಾಲದ ಕಾಯಿಲೆಗಳ ನಿರ್ವಹಣೆಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದ ವಿವಿಧ ಸಾಧಕರಿಗೆ ವಿಶೇಷ ಸನ್ಮಾನ
ಗ್ರಾಮೀಣ ಬಾಗದಲ್ಲಿ ಜನಿಸಿ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಸಾಧನೆ ಮಾಡಿದ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪೂರ, ಕೃಷಿ ಕ್ಷೇತ್ರದಲ್ಲಿ ರಾಷ್ಟ್ರಪತಿ ಚಿನ್ನದ ಪದಕ ವಿಜೇತ ಡಾ.ಮಲ್ಲರೆಡ್ಡಿ, ಡಾ.ಶಶಿಕಾಂತ, ಡಾ.ಗುರುನಾಥರೆಡ್ಡಿ, ದೇವೇಂದ್ರ ರಾಠೋಡ, ಡಾ.ಸ್ನೇಹಾ ಭಾರತಿ ಶಶಿಕಲಾ ಪಾಟೀಲ್, ಮುಖ್ಯಮಂತ್ರಿ ಪದಕ ವಿಜೇತ ಅಗ್ನಿ ಶಾಮಕದಳದ ಖತಾಲ್ ಹುಸೇನ್, ಗಣೇಶ ದೇವಣ್ಣ ಯಾದವ್, ಅನ್ವಿತಾ ಸುಬ್ರಮಣ್ಯ ರವರಿಗೆ ವಿವಿಧ ಮಠದ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.
ಕಡೇಚೂರು ಗುರುಮೂರ್ತಿ ಶಿವಾಚಾರ್ಯ ಸ್ವಾಮಿ, ಶ್ರೀಕ್ಷೇತ್ರ ನೇರಡಗಂ ಪಶ್ಚಿಮಾದ್ರಿ ಮಠದ ಪಂಚಮಸಿದ್ದಲಿಂಗ ಮಹಾಸ್ವಾಮಿ, ಸಿದ್ಧಾರೂಡ ಮಠದ ಸೋಮೇಶ್ವರಾನಂದ ಸ್ವಾಮಿ, ಚೇಗುಂಟದ ಕ್ಷಿರಲಿಂಗ ಸ್ವಾಮಿ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪೂರ, ಗ್ರಾಮದ ಹಿರಿಯ ಮುಖಂಡ ಬಸವರಾಜಪ್ಪ ಸ್ವಾಮಿ ಬದ್ದೇಪಲ್ಲಿ, ಯಾದಗಿರಿ ಲಾಯನ್ಸ್ ಕ್ಲಬ್‍ನ ಜಿಲ್ಲಾಧ್ಯಕ್ಷ ಭೀಮಣ್ಣಗೌಡ ಕ್ಯಾತ್ನಾಳ, ವೇದಾ ಆಸ್ಪತ್ರೆಯ ಡಾ. ನವನಿತಾ ರೆಡ್ಡಿ, ಹೊಂಗಿರಣ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಶರಣಬಸವ ಸ್ವಾಮಿ ಬದ್ದೇಪಲ್ಲಿ, ಡಾ.ಬಸವಣ್ಣೆಪ್ಪ, ಮುಖ್ಯಸ್ಥರು ಸಾವಯವ ಕೃಷಿ ಸಂಶೋಧನಾ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ ರಾಯಚೂರು ಸೇರಿದಂತೆ ಇತರರಿದ್ದರು.
ಗ್ರಾಮಸ್ಥರು ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಜನರು ಶಿಬಿರದ ಸದುಪಯೋಗ ಪಡೆದುಕೊಂಡರು. 100ಕ್ಕೂ ಹೆಚ್ಚು ಜನರಿಗೆ ಕನ್ನಡ ಮತ್ತು ಅನೇಕ ಜನರಿಗೆ ಯಾದಗಿರಿಯ ವೇದಾ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ನಿರ್ಧರಿಸಲಾಯಿತು






















