
ರಬಕವಿ-ಬನಹಟ್ಟಿ,ಏ.6 :-ಸಮಾಜದಲ್ಲಿ ಯಾವುದೇ ತಾರತಮ್ಯವಿಲ್ಲದೇ ಸಮಾನತೆ, ಸಾಮಾಜಿಕ ನ್ಯಾಯ ತತ್ವ ಅಡಕಗೊಂಡಲ್ಲಿ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆಂದು ತಹಶೀಲ್ದಾರ ಗಿರೀಶ ಸ್ವಾದಿ ಹೇಳಿದರು.
ತಹಶೀಲ್ದಾರ ಕಚೇರಿಯಲ್ಲಿ ನಡೆದ ಡಾ.ಬಾಬು ಜಗಜೀವನರಾಂ ಜಯಂತಿ ನಿಮಿತ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಹಸಿರುಕ್ರಾಂತಿಯ ಮೂಲಕ ಭಾರತದ ಕೃಷಿ ಉತ್ಪನ್ನಗಳಲ್ಲಿ ಹೆಚ್ಚಳಗೊಳಿಸುವತ್ತ ಹಾಗೂ ಆಹಾರ ಸ್ವಾವಲಂಬನೆ ಬೆಳೆಸಿಕೊಳ್ಳಲು ಡಾ.ಬಾಬು ಜಗಜೀವನರಾಂ ಪ್ರೇರಣೆ ಸ್ಮರಣಾರ್ಹ. ಯಾವುದೇ ಪ್ರಜೆ ಅಥವಾ ಜನಾಂಗ ಸಮಾನತೆಯಿಂದ ದೂರವಾದಲ್ಲಿ ಶೋಷಣೆಯ ಉತ್ಪತ್ತಿಯಾಗಿ ಅನಾರೋಗ್ಯ ಸಮಾಜ ನಿರ್ಮಾಣವಾಗುತ್ತದೆ. ಸಾಮಾಜಿ ನ್ಯಾಯ ಹಾಗೂ ಸಮಾನತೆ ತತ್ವಗಳು ಭಾರತೀಯ ಸಂವಿಧಾನದಲ್ಲಿ ಪ್ರದತ್ತವಾಗಿದ್ದರೂ ತಾರತಮ್ಯ ನಿವಾರಿಸಿಕೊಂಡು ನಾವೆಲ್ಲರೂ ಒಂದು ಎಂಬ ಭಾವದಿಂದ ಭವಿತವ್ಯದ ಬಲಿಷ್ಠ ಭಾರತ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕೆಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರ ಪ್ರಕಾಶ ಮಠಪತಿ, ಕಂದಾಯ ಅಧಿಕಾರಿ ಸದಾಶಿವ ಕುಂಬಾರ, ಚೇತನ ಭಜಂತ್ರಿ, ಬಾಬು ನಡುವಿನಮನಿ, ಮಂಜುನಾಥ ಆಲಗೂರ, ಚಂದ್ರು ಹರಿಜನ ಸೇರಿದಂತೆ ಅನೇಕ ದಲಿತ ಮುಖಂಡರು ಪಾಲ್ಗೊಂಡಿದ್ದರು.






















