Home ಮುಖಪುಟ ಸುದ್ದಿ ಅಗ್ನಿ ದುರಂತ: ದೆಹಲಿಯಲ್ಲಿ ೯ ಮಂದಿ ಸಜೀವ ದಹನ

ಅಗ್ನಿ ದುರಂತ: ದೆಹಲಿಯಲ್ಲಿ ೯ ಮಂದಿ ಸಜೀವ ದಹನ

ನವದೆಹಲಿ,ಮೇ೩:ರಾಜಧಾನಿ ನವದೆಹಲಿಯ ವಿವೇಕ ವಿಹಾರ ಪ್ರದೇಶದಲ್ಲಿರುವ ವಸತಿ ಕಟ್ಟಡದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಕನಿಷ್ಠ ೯ ಸಜೀವ ದಹನವಾಗಿದ್ದಾರೆ.೨೦ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಎಸಿ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ನಾಲ್ಕು ಮಹಡಿಗಳ ಕಟ್ಟಡದ ಮೇಲ್ಭಾಗದ ಮನೆಯಲ್ಲಿ ಬೆಂಕಿ ಪ್ರಾರಂಭವಾಗಿ ಕ್ಷಣಾರ್ಧದಲ್ಲಿ ೨ನೇ, ೩ನೇ ಹಾಗೂ ೪ನೇ ಮಹಡಿಗಳಿಗೂ ವ್ಯಾಪಿಸಿದೆ. ಅಗ್ನಿಶಾಮಕ ದಳದ ತಕ್ಷಣದ ಕಾರ್ಯಾಚರಣೆಯಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ರಕ್ಷಣಾ ಕಾರ್ಯ ಇನ್ನೂ ಮುಂದುವರಿದಿದೆ.


ಶಾಹದ್ರಾ ಜಿಲ್ಲೆಯ ಡಿಸಿಪಿ ರಾಜೇಂದ್ರ ಪ್ರಸಾದ್ ಮೀನಾ ಅವರು ನೀಡಿದ ಮಾಹಿತಿ ಪ್ರಕಾರ, ದುರಂತದಲ್ಲಿ ಮೃತಪಟ್ಟವರ ಮೃತದೇಹಗಳು ಮುಖ್ಯವಾಗಿ ೨ನೇ ಮಹಡಿಯಲ್ಲಿ ಪತ್ತೆಯಾಗಿವೆ. “ಈ ಘಟನೆದಲ್ಲಿ ಒಟ್ಟು ೯ ಮಂದಿ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ೧೦ರಿಂದ ೧೫ ಮಂದಿಯನ್ನು ಕಟ್ಟಡದಿಂದ ಹೊರತೆಗೆದು ರಕ್ಷಿಸಲಾಗಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಗುರು ತೇಗ್ ಬಹಾದೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.


ಘಟನೆ ಸ್ಥಳಕ್ಕೆ ೧೨ ಅಗ್ನಿಶಾಮಕ ವಾಹನಗಳು, ಡಿಡಿಎಂಎ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಕೈಗೊಂಡರು. ರಕ್ಷಿಸಲ್ಪಟ್ಟ ಹಲವರು ಹೊಗೆ ಉಸಿರಾಟದಿಂದ ಅಸ್ವಸ್ಥಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.


ಸ್ಥಳೀಯ ನಗರಸಭಾ ಸದಸ್ಯ ಪಂಕಜ್ ಲುತ್ರಾ ಅವರು “ಎರಡನೇ ಮಹಡಿಯ ಹಿಂಭಾಗದಲ್ಲಿ ಐದು ಮೃತದೇಹಗಳು ಪತ್ತೆಯಾಗಿವೆ. ಮತ್ತೊಂದು ಮೃತದೇಹ ಹಿಂಭಾಗದಲ್ಲೇ ಹಾಗೂ ಮೇಲ್ಮಹಡಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಮೃತರ ಗುರುತು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ಅಗತ್ಯವಿದೆ” ಎಂದು ತಿಳಿಸಿದ್ದಾರೆ.ಘಟನೆಯ ನಿಖರ ಕಾರಣ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಶಾರ್ಟ್ ಸರ್ಕ್ಯೂಟ್ ಅಥವಾ ಎಸಿ ಸ್ಫೋಟವೇ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.


ಪಂಜಾಬಿ ಬಾಗ್‌ನಲ್ಲೂ ಇತ್ತೀಚೆಗೆ ಅಗ್ನಿ ಅವಘಡ ನಡೆದಿದ್ದು, ಇದೇ ವೇಳೆ, ಕೆಲವು ವಾರಗಳ ಹಿಂದೆ ದೆಹಲಿಯ ಪಂಜಾಬಿ ಬಾಗ್ ಮೆಟ್ರೋ ನಿಲ್ದಾಣದ ಸಮೀಪದ ಕೈಗಾರಿಕಾ ಪ್ರದೇಶದಲ್ಲಿಯೂ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಆಗಲೂ ದಟ್ಟ ಹೊಗೆ ಆವರಿಸಿ, ಅಗ್ನಿಶಾಮಕ ದಳವು ಬಹು ವಾಹನಗಳೊಂದಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತ್ತು.