Home ಜಿಲ್ಲೆ ಬೆಂಗಳೂರು ರಾಹುಲ್ ಗಾಂಧಿ ವೋಟ್ ಚೋರ್: ಅಶೋಕ್ ವ್ಯಂಗ್ಯ

ರಾಹುಲ್ ಗಾಂಧಿ ವೋಟ್ ಚೋರ್: ಅಶೋಕ್ ವ್ಯಂಗ್ಯ

ಬೆಂಗಳೂರು,ಮೇ.೩- ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಬಿಜೆಪಿಯ ಜೀವರಾಜ್‌ಗೆ ಮುನ್ನಡೆ ಸಿಕ್ಕಿರುವುದು ಸತ್ಯಕ್ಕೆ ಜಯವಾಗಿದೆ ಎಂದು ವಿಧಾನಸಭೆಯ ವಿರೋದ ಪಕ್ಷದ ನಾಯಕ ಆರ್ ಅಶೋಕ್ ಸಂತಸ ವ್ಯಕ್ತಪಡಿಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಶೃಂಗೇರಿಯಲ್ಲಿ ಕಾಂಗ್ರೆಸ್ ಅಸಿಂಧು. ಸತ್ಯಕ್ಕೆ ಜಯವಾಗಿದೆ. ವೋಟ್ ಚೋರ್ ಕೌನ್ ಹೈ ರಾಹುಲ್ ಗಾಂಧಿ ಹೈ ಎಂದು ಬರೆದಿದ್ದಾರೆ.


ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಕರಾಳ ಮುಖವನ್ನ ಮತ್ತೊಮ್ಮೆ ಬಯಲು ಮಾಡಿದೆ. ಜನಾದೇಶಕ್ಕೆ ಮೋಸ ಮಾಡಿ ಅಕ್ರಮವಾಗಿ ಗೆಲುವು ಸಾಧಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಂಗ ನೀಡಿದ ತಕ್ಕ ಉತ್ತರವಾಗಿದೆ ಎಂದಿದ್ದಾರೆ

೨೦೨೩ರ ಚುನಾವಣೆಯಲ್ಲಿ ೨೭೯ ಅಂಚೆ ಮತಗಳನ್ನು ಅಕ್ರಮವಾಗಿ ತಿರಸ್ಕರಿಸುವ ಮೂಲಕ ಜನಾದೇಶವನ್ನು ಕಸಿದುಕೊಳ್ಳಲಾಗಿತ್ತು. ಅಂದು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರ ಮನವಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡರನ್ನು ವಿಜೇತರೆಂದು ಘೋಷಿಸಲಾಗಿತ್ತು.

ಅಧಿಕಾರ ಬಲಕ್ಕೆ ಮಣಿಯದ ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಆರ್. ನಟರಾಜ್ ಅವರ ಪೀಠ ನೀಡಿದ ಐತಿಹಾಸಿಕ ಆದೇಶದಂತೆ ನಿನ್ನೆ ಮರು ಎಣಿಕೆ ನಡೆಯಿತು. ಕಾಂಗ್ರೆಸ್ ಪಕ್ಷದ ಮೋಸ ಬಯಲಾಗಿದೆ ಎಂದಿದ್ದಾರೆ.

ಕಳೆದ ಮೂರು ವರ್ಷಗಳಿಂದ ಅನರ್ಹವಾಗಿ ಅಧಿಕಾರ ಅನುಭವಿಸಿದ ಕಾಂಗ್ರೆಸ್‌ಗೆ ಈಗ ಮುಖಭಂಗವಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ, ಇದು ಪ್ರಜಾಪ್ರಭುತ್ವದ ಗೆಲುವು. ಶೃಂಗೇರಿಯ ಮತದಾರರ ಮತದ ಮೌಲ್ಯಕ್ಕೆ ಸಂದ ಜಯ ಎಂದು ಹೇಳಿದ್ದಾರೆ.

ನ್ಯಾಯದೇವತೆಯ ಮೇಲೆ ವಿಶ್ವಾಸವಿಟ್ಟು ಸಂವಿಧಾನಾತ್ಮಕವಾಗಿ ಹೋರಾಡಿ ನ್ಯಾಯ ಪಡೆದ ಡಿ.ಎನ್. ಜೀವರಾಜ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಸತ್ಯಮೇವ ಜಯತೇ ಎಂದು ಹೇಳಿದ್ದಾರೆ.