Home ಮುಖಪುಟ ಸುದ್ದಿ ನಾಳೆ ಎಲ್ಲಾ ಡಿಸಿ ಕಚೇರಿಗಳಿಗೆ ರೈತರ ಮುತ್ತಿಗೆ

ನಾಳೆ ಎಲ್ಲಾ ಡಿಸಿ ಕಚೇರಿಗಳಿಗೆ ರೈತರ ಮುತ್ತಿಗೆ

ಬೆಂಗಳೂರು.ನ.೨-ಕಬ್ಬು ದರ ಏರಿಕೆ,ರೈತರ ಸಂಪೂರ್ಣ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಈಡೇರಿಕೆಗಾಗಿ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಹೋರಾಟ ನಡೆಸಲು ರೈತ ಸಂಘಟನೆಗಳ ಒಕ್ಕೂಟ ಮುಂದಾಗಿದೆ.


ಈ ಸಂಬಂಧ ಮಾಹಿತಿ ನೀಡಿರುವ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್,ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನವೆಂಬರ್ ೩ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲಾಗುತ್ತಿದೆ.ಜೊತೆಗೆ ನವೆಂಬರ್ ೫ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಗುತ್ತದೆ ಎಂದು ತಿಳಿಸಿದರು.


ಕಬ್ಬಿಗೆ ರಾಜ್ಯಸರ್ಕಾರ ಎಸ್‌ಎಪಿ ದರ ಘೋಷಣೆ ಮಾಡಬೇಕು.ಪಂಜಾಬ್ ರಾಜ್ಯದಲ್ಲಿ ಟನ್ ಕಬ್ಬಿಗೆ ೪೪೮೦ರೂ. ತಮಿಳುನಾಡು ಸರ್ಕಾರ ೪೦೦೦. ಉತ್ತರ ಪ್ರದೇಶ ಸರ್ಕಾರ ೪೨೦೦ ರೂ.ರಾಜ್ಯ ಸರ್ಕಾರಗಳು ನಿಗದಿ ಮಾಡಿವೆ. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿಯೂ ರಾಜ್ಯ ಸಲಹಾ ಬೆಲೆ ಘೋಷಣೆ ಮಾಡಬೇಕು ಎಂದರು.


ಕೇಂದ್ರ ಸರ್ಕಾರ ಕಬ್ಬಿನ ಎಪ್‌ಆರ್‌ಪಿ ದರ ಏರಿಕೆ ಮಾಡಬೇಕು.ಕಬ್ಬಿನ ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಕಾರಣ ಎಫ್‌ಆರ್‌ಪಿ ದರವನ್ನು ಕನಿಷ್ಠ ೧೦-೨೫ ಇಳುವರಿಗೆ ೪೫೦೦ ರೂಗೆ ಏರಿಕೆ ಮಾಡಬೇಕು.ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಈಗ ಟನ್ ಕಬ್ಬಿಗೆ ೪೦೦೦ ರೂ ನೀಡುವುದಾಗಿ ಘೋಷಣೆ ಮಾಡುವ ಕಾರ್ಖಾನೆಗಳು ಆರಂಭ ಮಾಡಲು ರೈತರ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸುತ್ತೇವೆ.ಇಂತಹ ಕಾರ್ಖಾನೆಗೆ ರೈತರು ಕಬ್ಬು ಸರಬರಾಜು ಮಾಡಬಹುದು.ಕಬ್ಬು ಬೆಳೆಗಾರಿಗೆ ಸಕ್ಕರೆ ಇಳುವರಿ ಮೋಸ ತೂಕದಲ್ಲಿ ಮೋಸ ತಪ್ಪಿಸಲು ಸರ್ಕಾರ ಪಾರದರ್ಶಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.


ರಾಜ್ಯದಲ್ಲಿ ಬರಗಾಲ ಹಿನ್ನೆಲೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು.ರಾಜ್ಯಾದ್ಯಂತ ರೈತ ಹೋರಾಟದಲ್ಲಿ ಪಾಲ್ಗೊಂಡ ರೈತರ ಮೇಲೆ ಹಾಕಿರುವ ಪೊಲೀಸ್ ಮೊಕದ್ದಮೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.


ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಾಳೆ ಬೃಹತ್ ಸಂಖ್ಯೆಯಲ್ಲಿ ರೈತರು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ. ಹಾಕಲಾಗುವುದು ಎಂದು ತಿಳಿಸಿದರು.


ರಾಜ್ಯದ ರೈತ ಸಂಘಟನೆಗಳ ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ವತಿಯಿಂದ ನ.೫ ರಂದು ಬೆಂಗಳೂರು ಫ್ರೀಡಂ ಪಾರ್ಕ್ ಬೃಹತ್ ನಿರಂತರ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದರು