
ಅಫಜಲಪುರ: ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರಕಬೇಕು ಹಾಗೂ ಪ್ರತಿ ಟನ್ ಕಬ್ಬಿಗೆ 5,500 ನಿಗದಿಪಡಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ನಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಅಫಜಲಪುರ ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದ ರೈತ ಮುಖಂಡರು ಬೆಂಬಲ ಸೂಚಿಸಿದ್ದಾರೆ.
ರೈತ ಮುಖಂಡರಾದ ಶಶಿಕಾಂತ ಗುರೂಜಿ ಹಾಗೂ ಚುನ್ನಪ್ಪ ಪೂಜಾರಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ದೇಸಾಯಿ ಕಲ್ಲೂರಿನ ರೈತರು, ಹೋರಾಟದಲ್ಲಿ ಪಾಲ್ಗೊಂಡು ರೈತರ ಬೇಡಿಕೆಗಳಿಗೆ ಧ್ವನಿಗೂಡಿಸಿದರು. ಅಲ್ಲದೆ, ಚಳವಳಿಗೆ ಆರ್ಥಿಕ ನೆರವು ನೀಡುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬಿದರು.
ರೈತ ಮುಖಂಡ ನಿಂಗಪ್ಪ ಮ್ಯಾಕೇರಿ ಮಾತನಾಡಿ ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು, ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರ ಸಭೆ ನಡೆಸಿ ಬೆಲೆ ನಿಗದಿಪಡಿಸುವ ನಿರೀಕ್ಷೆಯಿದೆ ಎಂದರು.
ಗುರ್ಲಾಪುರದ ಹೋರಾಟಕ್ಕೆ ಈ ಭಾಗದ ಮಹಿಳಾ ರೈತರು ತಂಡೋಪತಂಡವಾಗಿ ರೊಟ್ಟಿ, ಬುತ್ತಿ ಕಟ್ಟಿಕೊಂಡು ಆಗಮಿಸಿ ಬೆಂಬಲ ನೀಡುತ್ತಿರುವುದು ರೈತ ಒಗ್ಗಟ್ಟಿನ ಪ್ರತೀಕವಾಗಿದೆ. ರೈತರ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸಯ್ಯ ಆಕಾಶಮಠ, ಬಸವರಾಜ ನೂಲಾ, ಸೂರ್ಯಕಾಂತ ನೂಲಾ, ಮಡಿವಾಳ ಪಂಚಿಕಟ್ಟಿ, ರಾಜು ಶೇಗದಾರ, ರಾಜು ಪಂಚಿಕಟ್ಟಿ, ಶರಣು ಪಂಚಿಕಟ್ಟಿ, ಮಾಂತು ಕೊಗಟನೂರ, ಹಣಮಂತ ವರ್ಗಿ, ಪ್ರಭು ವರ್ಗಿ, ಸಿದ್ದು ಸೋಲಾಪುರ, ಭಾಗಣ್ಣ ಅಡಿಗಿ, ಇಬ್ರಾಹಿಂ ಸವಾರ ಇದ್ದರು.






















