Home ಜಿಲ್ಲೆ ರೈತರ ಬೇಡಿಕೆಗಳಿಗೆ ಧ್ವನಿ: ಮೇ ೮ರಂದು ವಿಜಯಪುರದಲ್ಲಿ ರಾಜ್ಯ ಮಟ್ಟದ ಮಹಾಸಮಾವೇಶ

ರೈತರ ಬೇಡಿಕೆಗಳಿಗೆ ಧ್ವನಿ: ಮೇ ೮ರಂದು ವಿಜಯಪುರದಲ್ಲಿ ರಾಜ್ಯ ಮಟ್ಟದ ಮಹಾಸಮಾವೇಶ

ಯಾದಗಿರಿ:ಏ.೩೦: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮೇ ೮ರಂದು ವಿಜಯಪುರದಲ್ಲಿ ೪ನೇ ರಾಜ್ಯ ಮಟ್ಟದ ಬೃಹತ್ ರೈತ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉತ್ತರ ಕರ್ನಾಟಕ ಅಧ್ಯಕ್ಷ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್ ತಿಳಿಸಿದರು.

ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯಿಂದ ೫೦೦ಕ್ಕೂ ಅಧಿಕ ರೈತರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಈ ಸಮಾವೇಶ ರೈತ ಚಳವಳಿಗೆ ಹೊಸ ದಿಕ್ಕು ನೀಡಲಿದೆ ಎಂದು ಹೇಳಿದರು.

ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಆಣೆಕಟ್ಟಿನ ಎತ್ತರವನ್ನು ೫೨೪.೨೫೬ ಮೀಟರ್‌ಗೆ ಹೆಚ್ಚಿಸಿ, ಅದರಿಂದ ಪ್ರಭಾವಿತ ರೈತರಿಗೆ ಸಂಪೂರ್ಣ ಭೂ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕು. ಜೊತೆಗೆ ಏಳು ಜಿಲ್ಲೆಗಳಿಗೆ ಸಮಗ್ರ ನೀರಾವರಿ ವ್ಯವಸ್ಥೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಆಲಮಟ್ಟಿ ನೀರಾವರಿ ಯೋಜನೆಗೆ ಸಂಬAಧಿಸಿದAತೆ ಮುಳುಗಡೆಗೆ ಗುರುತಿಸಿದ ಜಮೀನಿಗಿಂತ ಹೆಚ್ಚು ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ಸಿಗದಿರುವುದನ್ನು ಅವರು ಖಂಡಿಸಿ, ತಕ್ಷಣ ಮಂಜೂರು ಮಾಡುವಂತೆ ಆಗ್ರಹಿಸಿದರು.

ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಂಬಲ ಬೆಲೆಯೊಂದಿಗೆ ಖರೀದಿ, ಮೌಲ್ಯವರ್ಧನೆ ಹಾಗೂ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸಮಗ್ರ ಯೋಜನೆ ರೂಪಿಸಬೇಕು ಎಂದರು.

ವಿದ್ಯುತ್ ಅಕ್ರಮ-ಸಕ್ರಮ ಯೋಜನೆಯನ್ನು ಮುಂದುವರೆಸಿ, ವಿದ್ಯುತ್ ಇಲಾಖೆಯ ಖಾಸಗೀಕರಣವನ್ನು ಕೈಬಿಡಬೇಕು. ಹಳೆಯ ವಿದ್ಯುತ್ ತಂತಿಗಳು, ಕಂಬಗಳು, ಕೇಬಲ್‌ಗಳನ್ನು ಬದಲಾಯಿಸಿ ಕಡಿಮೆ ದರದಲ್ಲಿ ಟ್ರಾನ್ಸ್ಫಾರ್ಮರ್‌ಗಳನ್ನು (ಟಿ.ಸಿ.) ಒದಗಿಸಬೇಕು ಎಂದು ಹೇಳಿದರು.

ರೈತರಿಗೆ ಹಗಲು ೧೨ ಗಂಟೆಗಳ ತ್ರಿಫೇಸ್ ಹಾಗೂ ರಾತ್ರಿ ಸಿಂಗಲ್ ಫೇಸ್ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು. ಏತ ನೀರಾವರಿ ಕಾಲುವೆಗಳ ಕ್ಲೋಜರ್ ಕಾಮಗಾರಿಗಳಿಗೆ ಪ್ರತಿ ವರ್ಷ ಅನುದಾನ ಮೀಸಲಿಟ್ಟು ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಹೊಸ ತಾಲೂಕುಗಳಿಗೆ ಅಗತ್ಯವಿರುವ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಸಿಬ್ಬಂದಿಯನ್ನು ಒದಗಿಸಬೇಕು. ಕಳಪೆ ಗುಣಮಟ್ಟದ ಹಾಗೂ ಅನಧಿಕೃತ ಬೀಜ, ಗೊಬ್ಬರ, ಕೀಟನಾಶಕಗಳ ಮಾರಾಟವನ್ನು ತಡೆದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

೬೦ ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ ?೧೦,೦೦೦ ಪಿಂಚಣಿ ನೀಡಬೇಕು. ಕೇಂದ್ರದ ಕೃಷಿ, ಭೂಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ರದ್ದುಪಡಿಸಬೇಕು. ಪ್ರತಿ ತಾಲೂಕಿನಲ್ಲಿ ಸೌಲಭ್ಯಯುತ ರೈತಭವನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರವನ್ನು ತೊಡೆದುಹಾಕಿ, ರೈತರಿಗೆ ಗೌರವದಿಂದ ಸೇವೆ ನೀಡಬೇಕು. ಪರವಾನಗಿ ಭೂಮಾಪಕರ ಬೇಡಿಕೆಗಳಾದ ಸೇವಾ ಸಕ್ರಮೀಕರಣ ಹಾಗೂ ಸಮಾನ ವೇತನದ ವಿಚಾರಗಳನ್ನು ಪರಿಹರಿಸಿ, ರೈತರ ಜಮೀನು ಅಳತೆ ಕಾರ್ಯ ಸುಗಮಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸೇನೆಯ ಜಿಲ್ಲಾಧ್ಯಕ್ಷ ವಿಜಯ ಭರತ, ಎಂ.ಡಿ. ಮೊಹಮ್ಮದ್, ಅಶೋಕ ಸಾಹುಕಾರ ಬಲಕಲ್, ಮಲ್ಲಣ್ಣಗೌಡ ನಗನೂರು, ಕೃಷ್ಣ ಕಟಗಿ, ಭೀಮಶಪ್ಪ ಕರಕಿ ಸೇರಿದಂತೆ ಹಲವು ಮು
ಖಂಡರು ಉಪಸ್ಥಿತರಿದ್ದರು.