
ಕೆಂಗೇರಿ,ಏ೨೫:ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು ಅವರ ಆರೋಗ್ಯ ಸುಧಾರಣೆ ಹಾಗೂ ವೈದ್ಯಕೀಯ ಸೌಲಭ್ಯಗಳಿಗೆ ಆಶ್ರಯಿಸಿರುವ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಎಸ್. ಟಿ. ಸೋಮಶೇಖರ್ ತಿಳಿಸಿದರು.
ಜಿಬಿಎ ಕೆಂಗೇರಿ ಕೋಟೆ ವಾರ್ಡ್ ವ್ಯಾಪ್ತಿಯ ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ೨೪ ಘಿ ೭ ನಿರಂತರ ವಿದ್ಯುತ್ ಸರಬರಾಜು ಮಾಡುವಡುವ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಗರ್ಭಿಣಿ ಮಹಿಳೆ ಹಾಗೂ ಮಗುವಿನ ಜೀವ ರಕ್ಷಣೆ ಹಾಗೂ ಸುರಕ್ಷತೆ ಗಾಗಿ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಭರಿಸರಾಗದ ನಾಗರಿಕರಿಗೆ ಸರ್ಕಾರಿ ಆಸ್ಪತ್ರೆಗಳು ವರವಾಗಿವೆ, ಪರಿಣಿತ ಹಾಗೂ ತಜ್ಞ ವೈದ್ಯರುಗಳಿರುವ ಸರ್ಕಾರ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ನಾಗರೀಕರಿಗೆ ಉತ್ತಮ ಸೇವೆ ಒದಗಿಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವುದೇ ನಮ್ಮ ಧ್ಯೇಯವಾಗಿದೆ ಎಂದರು. ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ, ಅಗತ್ಯ ಸಿಬ್ಬಂದಿ, ತಜ್ಞ ವೈದ್ಯರ ಲಭ್ಯತೆ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಬೆಸ್ಕಾಂ ಪಶ್ಚಿಮ ವಲಯ ಕಾರ್ಯ ಪಾಲಕ ಇಂಜಿನಿಯರ್ ಎನ್.ಶಿವಕುಮಾರ್ ಮಾತನಾಡಿ ಅಧಿಕಾರ, ಅಂತಸ್ತು ಶಾಶ್ವತವಲ್ಲ ದೊರಕಿರುವ ಅವಕಾಶವನ್ನು ಬಡವರ ಸೇವೆಗೆ ಮುಡುಪಾಗಿಡುವ ಮೂಲಕ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಬೇಕಾಗಿದೆ ಎಂದರು. ಗರ್ಭಿಣಿ ಮಹಿಳೆ ಹಾಗೂ ಮಗುವಿನ ಜೀವ ರಕ್ಷಣೆಗಾಗಿ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದರು. ಜನಸೇವೆಯೇ ಜನಾರ್ದನ ಸೇವೆ ಎಂಬುದನ್ನು ಅರಿತು ಕಾರ್ಯನಿರ್ವಹಿಸುತ್ತಿರುವ ಶಾಸಕ ಎಸ್. ಟಿ. ಸೋಮಶೇಖರ್ ರವರ ದೂರ ದೃಷ್ಟಿ ಚಿಂತನೆಯೇ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು. ಜನಸ್ನೇಹಿ ಆಡಳಿತದ ಮೂಲಕ ನಾಗರಿಕರಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಜಯಪ್ರಕಾಶ್ ನಾರಾಯಣ ವೇದಿಕೆ ಅಧ್ಯಕ್ಷ ಬಿ.ಎಂ. ಶಿವಕುಮಾರ್,, ಕೆಂಗಲ್ ಹನುಮಂತಯ್ಯ ಜಿಬಿಎ ವಾರ್ಡ್ ಮುಖಂಡ ಚೇತನ್ ಗೌಡ, ಕೆಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಸಂದ್ರ ನಾಗರಾಜು, ಕಾಂಗ್ರೆಸ್ ಮುಖಂಡರಾದ ವೆಲ್ಡಿಂಗ್ ಕೃಷ್ಣಪ್ಪ,ಬಿ.ಆರ್ ಶಿವಮಾದಯ್ಯ,ಟಿ ಪ್ರಭಾಕರ್, ಕೆ.ಸಿ. ಸತೀಶ್, ಲಕ್ಷ್ಮಿ ಪ್ರಭುರಾಜ್,ಆನಂದ್, ಕೇಬಲ್ ಶ್ರೀನಿವಾಸ್, ಪಾರ್ವತಿ ಮತ್ತಿತರರು ಉಪಸ್ಥಿತರಿದ್ದರು.

























