Home ಜಿಲ್ಲೆ ಕಲಬುರಗಿ ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಿ: ಶಾಸಕ ಡಾ. ಅವಿನಾಶ ಜಾಧವ

ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಿ: ಶಾಸಕ ಡಾ. ಅವಿನಾಶ ಜಾಧವ

ಕಾಳಗಿ : ತಾಲ್ಲೂಕಿನ ಎಲ್ಲ ಪಿಡಿಒಗಳು, ನೀರಾವರಿ ಅಧಿಕಾರಿಗಳು ಮತ್ತು ವಿವಿಧ ಜಿ.ಪಂ, ತಾ.ಪಂ ನೀರಾವರಿ ಸಂಬಂಧಿತ ಅಧಿಕಾರಿಗಳು ಜನ ಮತ್ತು ಜಾನುವಾರುಗೆ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಡಾ. ಅವಿನಾಶ ಜಾಧವ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಆಡಳಿತ ಅಧಿಕಾರಿಗಳು ಮತ್ತು ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಲಭ್ಯವಿರುವ ನೀರಿನ ಸದ್ಬಳಕೆ ಮಾಡಿಕೊಂಡು ಮುಂದೆ ಸಮಸ್ಯೆ ಆಗದಂತೆ ನೀರನ್ನು ಕಾಯ್ದಿರಿಸಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕೊಡ್ಲಿ, ಸಾಸರಗಾಂವ, ಮಂಗಲಗಿ, ಟೆಂಗಳಿ, ಅಲ್ಲಾಪುರ ಇನ್ನೂ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿದ್ದು, ಈ ಬಾರಿ ಯಾವುದೇ ಗ್ರಾಮಕ್ಕೆ ಸಮಸ್ಯೆ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತೀ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಖುದ್ದಾಗಿ ಪರಿಶೀಲಿಸಬೇಕು. ಎಲ್ಲಾ ಬೋರ್‍ವೆಲ್‍ಗಳ ಮಾಹಿತಿ ಕ್ರೋಢೀಕರಿಸಬೇಕು. ಚಾಲ್ತಿಯಲ್ಲಿರುವ ಬೋರ್‍ವೆಲ್‍ಗಳನ್ನು ಪರಿಶೀಲನೆ ಮಾಡಬೇಕು. ದುರಸ್ತಿ ಅವಶ್ಯಕತೆ ಇರುವ ಬೋರ್‍ವೆಲ್‍ಗಳ ದುರಸ್ತಿ ಕ್ರಮ ವಹಿಸಬೇಕು.

ಯಾವುದೇ ನೀರಿನ ಅಭಾವವಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ನೀರಿನ ಸಮಸ್ಯೆ ಉದ್ಬವಿಸಬಹುದಾದ ಸ್ಥಳಗಳ ಕುರಿತು ಮುಂಚಿತವಾಗಿ ತಿಳಿದುಕೊಂಡು ಮಾಹಿತಿ ಸಲ್ಲಿಸಬೇಕು. ನಗರ ನೀರು ಸರಬರಾಜಿಗೆ ಸಂಬಂಧಿತ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು. ಗ್ರಾ.ಪಂ ಹಂತದಲ್ಲಿಯೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ತಹಸೀಲ್ದಾರ್ ಪೃಥ್ವಿರಾಜ ಪಾಟೀಲ, ತಾ.ಪಂ ಇಓ ಬಸವಲಿಂಗಪ್ಪ ಡಿಗ್ಗಿ, ಮುಖಂಡರಾದ ವಿಜಯಕುಮಾರ ಚೇಂಗಟಿ, ರಮೇಶ ಕಿಟ್ಟದ, ಪ್ರಶಾಂತ ಕದಂ, ಜಿತೇಂದ್ರ ರಾಠೋಡ, ಜಗದೀಶ ಪಾಟೀಲ, ಸಂತೋಷ ಪಾಟೀಲ, ಪುರುಷೋತ್ತಮ ಗುತ್ತೇದಾರ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.