
ಚಿಕ್ಕಬಳ್ಳಾಪುರ, ನ.೮- ಇಲ್ಲಿನ ಕೆ.ಟಿ. ರಸ್ತೆಯಲ್ಲಿನ ಬ್ರಹ್ಮ ಕುಮಾರೀಸ್ ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ದೀಪಾವಳಿಯನ್ನು ಬಾಹ್ಯ ದೀಪಗಳನ್ನು ಹಚ್ಚುವ ಹಬ್ಬವಾಗಿ ಆಚರಿಸದೆ, ಆಧ್ಯಾತ್ಮಿಕ ಮತ್ತು ಆಂತರಿಕ ಮಹತ್ವಕ್ಕೆ ಹೆಚ್ಚಿನ ಒತ್ತು ಕೊಟ್ಟು ಆಚರಣೆ ಮಾಡಲಾಯಿತು.
ಸ್ಥಳೀಯ ಸಂಚಾಲಕರಾದ ರಾಜಯೋಗಿನಿ ಬಿ.ಕೆ. ಲಲಿತ ಅಕ್ಕ ಅವರು ಸಹೋದರ ಸಹೋದರಿಯ ರೊಂದಿಗೆ ದೀಪದಿಂದ ದೀಪವ ಹಚ್ಚಿ ಆತ್ಮಜ್ಯೋತಿಯನ್ನು ಬೆಳಗಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೀಪಾವಳಿಯು ಆತ್ಮದ ಜಾಗೃತಿ ಮತ್ತು ಅಜ್ಞಾನದ ಕತ್ತಲೆಯನ್ನು ದೂರಮಾಡುವ ಪವಿತ್ರ ಆಚರಣೆಯಾಗಿದೆ, ದೀಪಾವಳಿ ಹಬ್ಬವು ಆಂತರಿಕ ಜ್ಯೋತಿಯನ್ನು ಬೆಳಗಿಸುವುದರ ಜೊತೆಗೆ ಬಾಹ್ಯವಾಗಿ ಮಣ್ಣಿನ ದೀಪಗಳನ್ನು ಹಚ್ಚುವ ಮುನ್ನ, ಪ್ರತಿಯೊಬ್ಬರೂ ತಮ್ಮಲ್ಲಿರುವ ಆತ್ಮಜ್ಯೋತಿಯನ್ನು ಬೆಳಗಿಸಿಕೊಳ್ಳಬೇಕು ಎಂದು ಹೇಳಿದರು.
ಕೋಪ, ಲೋಭ, ಅಹಂಕಾರ ಮತ್ತು ಮತ್ಸರಗಳೆಂಬ ಕತ್ತಲೆಯನ್ನು ಕಳೆದು, ಶಾಂತಿ, ಪವಿತ್ರತೆ ಮತ್ತು ಪ್ರೀತಿಯ ಬೆಳಕನ್ನು ತುಂಬಿಕೊಳ್ಳುವುದೇ ನಿಜವಾದ ದೀಪಾವಳಿ ಎಂದು ಅವರು ಹೇಳಿದರು. ರಾಜಯೋಗ ಧ್ಯಾನದ ಮೂಲಕ ಪರಮಪಿತ ಪರಮಾತ್ಮನ (ಶಿವಬಾಬಾ) ನೆನಪಿನಲ್ಲಿ ಸಹಜ ರಾಜಯೋಗ ಧ್ಯದಸದೊಂದಿಗೆ ಸರ್ವೋಚ್ಚ ಜ್ಯೋತಿಯಾಗಿರುವ ಪರಮಾತ್ಮನಿಂದ ಜ್ಞಾನದ ಬೆಳಕನ್ನು ಪಡೆದು, ಮಸುಕಾಗಿರುವ ಆತ್ಮಗಳನ್ನು ಜಾಗೃತಗೊಳಿಸುವ ಪ್ರಕ್ರಿಯೆ ಈ ದೀಪಾವಳಿ ಹಬ್ಬ ಮೂಡಿಸಲಿದೆ ಎಂದು ಅವರು ಹೇಳಿದರು.
ಆಧ್ಯಾತ್ಮಿಕವಾಗಿ ನಮ್ಮ ಹಳೆಯ ನಕಾರಾತ್ಮಕ ಸಂಸ್ಕಾರಗಳು ಮತ್ತು ಕರ್ಮಗಳ ಖಾತೆಗಳನ್ನು ಕ್ಷಮಾಗುಣ ಹಾಗೂ ಶುಭ ಹಾರೈಕೆಗಳ ಮೂಲಕ ನಾವೆಲ್ಲ ಲೆಕ್ಕಾಚುಕ್ತಾ ಮಾಡಬೇಕು. ಹೊಸದಾದ, ಸಕಾರಾತ್ಮಕ ಮತ್ತು ದೈವಿ ಗುಣಗಳೊಂದಿಗೆ ಜೀವನದ ಹೊಸ ವರ್ಷವನ್ನು ಆರಂಭಿಸಲು ಇದೊಂದು ಪ್ರೇರಣಾದಾಯಕ ಹಬ್ಬವಾಗಿದೆ ಎಂದು ಹೇಳಿದರು.
ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ವಿಶೇಷ ಆಧ್ಯಾತ್ಮಿಕ ಸಂದೇಶವಿರುವ ’ಮುರಳಿ’ ಓದಿ ಲಲಿತ ಅಕ್ಕ ಅವರು ಹಬ್ಬದ ಜಾಗೃತಿಯನ್ನು ಮೂಡಿಸಿದರು. ಈ ಸಂದರ್ಭದಲ್ಲಿ ಬಿ.ಕೆ. ಸಹೋದರಿಯರಾದ ಚಿನ್ನಮ್ಮ, ದೊಡ್ಡಲಕ್ಷ್ಮಿದೇವಕ್ಕ, ಮುನಿಯಮ್ಮ, ಸಾವಿತ್ರಮ್ಮ, ಚಿಕ್ಕಲಕ್ಷ್ಮಿದೇವಕ್ಕ, ನಾಗರತ್ನ ಅಕ್ಕ, ವಿಜಯ ಅಕ್ಕ, ಬಿ.ಕೆ. ಸಹೋದರರಾದ ನಂಜುಂಡಾಚಾರಿ ಅಣ್ಣ, ಮಂಜಣ್ಣ, ನರಸಿಂಹಲು ಅಣ್ಣ ಸೇರಿದಂತೆ ಇನ್ನಿತರ ಬಿ.ಕೆ. ಸಹೋದರ ಸಹೋದರಿಯರು ಇದ್ದರು.























