
ಯಾದಗಿರಿ:ಏ.೨:ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದರಾದ ಜಿ. ಕುಮಾರ ನಾಯಕ ಅವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ತಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಯುವಜನರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಹಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು.
ಈ ವೇಳೆ ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸುವಂತೆ ಅವರು ಆಗ್ರಹಿಸಿದರು. ರಾಜ್ಯದ ಸಾವಿರಾರು ಅಭ್ಯರ್ಥಿಗಳು ಭಾಷಾ ಅಡೆತಡೆ ಕಾರಣದಿಂದ ಅವಕಾಶ ಕಳೆದುಕೊಳ್ಳುತ್ತಿರುವುದನ್ನು ಗಮನಕ್ಕೆ ತಂದು, ಕನ್ನಡದಲ್ಲಿ ಪರೀಕ್ಷೆ ನಡೆಸಿದರೆ ಗ್ರಾಮೀಣ ಹಾಗೂ ಹಿಂದುಳಿದ ವರ್ಗದ ಯುವಕರಿಗೂ ಸಮಾನ ಅವಕಾಶ ದೊರೆಯಲಿದೆ ಎಂದು ವಿವರಿಸಿದರು.
ಇದಲ್ಲದೆ, ರಾಯಚೂರು ಪ್ರದೇಶದಲ್ಲಿ ಸರಕು ಸಾಗಣೆ ವ್ಯವಸ್ಥೆಯನ್ನು ಬಲಪಡಿಸಲು ಆಧುನಿಕ ಕಾರ್ಗೋ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಸಂಸದರು ಅಭಿಪ್ರಾಯಪಟ್ಟರು. ಇದರಿಂದ ಕೈಗಾರಿಕೆ, ಕೃಷಿ ಉತ್ಪನ್ನಗಳ ರವಾನೆ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ವೇಗ ಸಿಗಲಿದೆ ಎಂದರು.
ಹಾಗೆಯೇ, ವಿಶಾಖಪಟ್ಟಣಂ-ಮಹೆಬೂಬ್ನಗರ ನಡುವಿನ ರೈಲು ಸೇವೆಯನ್ನು ರಾಯಚೂರಿನವರೆಗೆ ವಿಸ್ತರಿಸುವಂತೆ ಹಾಗೂ ರೈಲು ಸಂಖ್ಯೆ ೨೦೯೫೩/೨೦೯೫೪ ಮತ್ತು ೨೨೬೮೯/೨೨೬೯೦ ರೈಲುಗಳನ್ನು ಅಬು ರೋಡ್ ತನಕ ವಿಸ್ತರಿಸುವ ಕುರಿತು ಸಹ ಅವರು ಮನವಿ ಸಲ್ಲಿಸಿದರು. ಈ ಕ್ರಮಗಳಿಂದ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗುವ ಜೊತೆಗೆ ಪ್ರಾದೇಶಿಕ ಸಂಪರ್ಕತೆ ಮತ್ತಷ್ಟು ಬಲಪಡುತ್ತದೆ ಎಂದು ಸಂಸದರು ತಿಳಿಸಿದ್ದಾರೆ.
ಈ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದರು ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದು, ಸಮಸ್ಯೆಗಳ ಪರಿಹಾರಕ್ಕೆ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

























