
ಗುರುಮಿಠಕಲ್:ಮಾ.21:ಪಟ್ಟಣದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಈದ್-ಉಲ್-ಫಿತರ್ ಆಚರಿಸಿದರು. ಪಟ್ಟಣದ ಪ್ರಮುಖ ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸಮುದಾಯದ ಬಾಂಧವರು ಸಾಮೂಹಿಕ ನಮಾಜ್ ನಿರ್ವಹಿಸಿದರು.
ಈದ್ಗಾದಲ್ಲಿ ವಿಶೇಷ ಪ್ರಾರ್ಥನೆ
ಪಟ್ಟಣದ ಈದ್ಗಾ ಮೈದಾನದಲ್ಲಿ ನಡೆದ ವಿಶೇಷ ನಮಾಜಿನ ನೇತೃತ್ವವನ್ನು ಖತೀಬ್ ಹಫೀಜ್ ಮುಜಫರ್ ಹುಸೇನ್ ಖಾನ್ ಸಾಬ್ ಅವರು ವಹಿಸಿದ್ದರು. ನಮಾಜ್ ನಂತರ ನೆರೆದಿದ್ದ ಎಲ್ಲರಿಗೂ ಈದ್-ಉಲ್-ಫಿತರ್ ಹಬ್ಬದ ಶುಭಾಶಯಗಳನ್ನು ಕೋರಿದ ಅವರು, “ಹಬ್ಬವು ಶಾಂತಿ, ಸಹಬಾಳ್ವೆ ಮತ್ತು ಭ್ರಾತೃತ್ವದ ಸಂಕೇತವಾಗಿದೆ. ಸಮಾಜದಲ್ಲಿ ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆ ನೆಲೆಸಲಿ” ಎಂದು ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ದೇಶದ ಏಳಿಗೆ ಹಾಗೂ ಮಳೆ-ಬೆಳೆಗಾಗಿ ವಿಶೇಷ ಪ್ರಾರ್ಥನೆ (ದುವಾ) ಸಲ್ಲಿಸಲಾಯಿತು.
ಗಡಿ ಮೊಹಲ್ಲಾ ಜಾಮಿಯಾ ಮಸೀದಿಯಲ್ಲಿ ಸಡಗರ
ಅದೇ ರೀತಿ, ಪಟ್ಟಣದ ಗಡಿ ಮೊಹಲ್ಲಾದಲ್ಲಿರುವ ಜಾಮಿಯಾ ಮಸೀದಿಯಲ್ಲಿಯೂ ಸಹ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಸಾಮೂಹಿಕವಾಗಿ ನಮಾಜ್ ಸಲ್ಲಿಸಿದರು. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಹೊಸ ಬಟ್ಟೆ ಧರಿಸಿ, ಪರಸ್ಪರ ಅಪ್ಪಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ನಮಾಜ್ ನಂತರ ಮಸೀದಿಯ ಮುಂಭಾಗದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣದ ಪೆÇಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಪ್ರಮುಖ ರಾಜಕೀಯ ಮುಖಂಡರು ಹಾಗೂ ಗಣ್ಯರು ಈದ್ಗಾಕ್ಕೆ ಭೇಟಿ ನೀಡಿ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು.






















