
ವಡಿಗೇರಾ: ಮಾ.೮:ದೇಶದ ಭವಿಷ್ಯ ರೂಪಿಸುವ ಮಹತ್ತರ ಹೊಣೆಗಾರಿಕೆ ಮಕ್ಕಳ ಮೇಲಿದೆ. ಆದ್ದರಿಂದ ಪಾಲಕರು ಮಕ್ಕಳಿಗಾಗಿ ಆಸ್ತಿ ಸಂಪಾದಿಸುವುದಕ್ಕಿAತ, ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಮೌಲ್ಯಗಳನ್ನು ನೀಡುವ ಮೂಲಕ ಅವರನ್ನು ಸಮಾಜದ ಅಮೂಲ್ಯ ಆಸ್ತಿಯನ್ನಾಗಿ ರೂಪಿಸುವುದು ಅತ್ಯಂತ ಮುಖ್ಯ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅಭಿಪ್ರಾಯಪಟ್ಟರು.ವಡಿಗೇರಾ ತಾಲೂಕಿನ ಕುರಕುಂದಾ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಗಳ ವತಿಯಿಂದ ಆಯೋಜಿಸಲಾದ ಬಾಲಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಲ್ಯಾವಸ್ಥೆಯೇ ವ್ಯಕ್ತಿತ್ವ ನಿರ್ಮಾಣದ ಬಲವಾದ ಅಡಿಪಾಯವಾಗಿದ್ದು, ಮಕ್ಕಳ ಸಮಗ್ರ ಬೆಳವಣಿಗೆಗೆ ಅಂಗನವಾಡಿ ಕೇಂದ್ರಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು.
ಅಂಗನವಾಡಿ ಕೇಂದ್ರಗಳಲ್ಲಿ ಆಯೋಜಿಸಲಾಗುತ್ತಿರುವ ಬಾಲಮೇಳ ಕಾರ್ಯಕ್ರಮಗಳು ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಹೊರತರುವ ವೇದಿಕೆಯಾಗಿವೆ. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳ ಬೌದ್ಧಿಕ, ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಉತ್ತೇಜನ ಸಿಗುವುದರ ಜೊತೆಗೆ ಅವರ ಆರೋಗ್ಯದ ಸ್ಥಿತಿಗತಿಗಳನ್ನು ಅರಿಯುವ ಅವಕಾಶವೂ ದೊರೆಯುತ್ತದೆ. ಆದ್ದರಿಂದ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಸದುಪಯೋಗ ಪಡೆಯಬೇಕು ಎಂದು ಅವರು ಕರೆ ನೀಡಿದರು.
ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿ ತಾಯಂದಿರಿಗೆ ಹಾಗೂ ಪುಟ್ಟ ಮಕ್ಕಳಿಗೆ ಪೌಷ್ಠಿಕ ಆಹಾರ, ಆರೋಗ್ಯ ತಪಾಸಣೆ ಹಾಗೂ ಶಿಕ್ಷಣ ಸಂಬAಧಿತ ವಿವಿಧ ಸೌಲಭ್ಯಗಳು ಲಭ್ಯವಾಗುತ್ತಿವೆ. ಈ ಯೋಜನೆಗಳ ಕುರಿತು ಗ್ರಾಮೀಣ ಜನರಿಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವಾಗಿದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಪ್ರೀತಿ, ವಾತ್ಸಲ್ಯ, ನೈತಿಕ ಮೌಲ್ಯಗಳು ಹಾಗೂ ಸಂಸ್ಕೃತಿಯನ್ನು ಬೋಧಿಸಿದರೆ ಅವರು ಭವಿಷ್ಯದಲ್ಲಿ ದೇಶದ ಪ್ರಗತಿಗೆ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರಾಗುತ್ತಾರೆ ಎಂದು ಶಾಸಕ ತುನ್ನೂರ ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಟಿವಿ ಸಾಧನಗಳನ್ನು ವಿತರಣೆ ಮಾಡಲಾಗಿದ್ದು, ಮಕ್ಕಳ ಶಿಕ್ಷಣ ಹಾಗೂ ಮನರಂಜನಾ ಚಟುವಟಿಕೆಗಳಿಗೆ ಇದರಿಂದ ಹೆಚ್ಚಿನ ನೆರವು ದೊರೆಯಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ನಂತರ ಕುರಕುಂದಾ ಗ್ರಾಮದ ಹೊರವಲಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿಯ ಸ್ಥಳಕ್ಕೆ ಶಾಸಕ ತುನ್ನೂರ ಭೇಟಿ ನೀಡಿ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಯೋಗಕ್ಷೇಮವನ್ನು ವಿಚಾರಿಸಿದರು.
ಈ ವೇಳೆ ಮಾತನಾಡಿದ ಅವರು, ಬೇಸಿಗೆ ದಿನಗಳಲ್ಲಿ ಗ್ರಾಮೀಣ ಜನರು ಉದ್ಯೋಗದ ಹುಡುಕಾಟದಲ್ಲಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ಅವಶ್ಯಕತೆ ಇಲ್ಲ. ಸರ್ಕಾರದ ನರೇಗಾ ಯೋಜನೆಯಡಿ ಗ್ರಾಮದಲ್ಲಿಯೇ ಉದ್ಯೋಗಾವಕಾಶಗಳು ಲಭ್ಯವಿದ್ದು, ಇದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಕಾರ್ಮಿಕರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ ಸುರಕ್ಷಿತವಾಗಿ ಕೆಲಸ ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹಾಗೂ ಜನರ ಜೀವನಮಟ್ಟ ಸುಧಾರಣೆಗೆ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಜನರು ಅವುಗಳ ಸದುಪಯೋಗ ಪಡೆದುಕೊಂಡರೆ ಗ್ರಾಮಗಳು ಸಮಗ್ರವಾಗಿ ಅಭಿವೃದ್ಧಿಯ ದಾರಿಯಲ್ಲಿ ಸಾಗಲಿವೆ ಎಂದು ಶಾಸಕ ತುನ್ನೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಡಿಗೇರಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ಸಿಡಿಪಿಒ ಮಲ್ಲಣ್ಣ ದೇಸಾಯಿ, ಪಿಡಿಒ ಶೇಷಗಿರಿ ರಾವ್, ಸಂಬAಧಿತ ಅಭಿಯಂತರರು, ಅಂಗನವಾಡಿ ಮೇಲ್ವಿಚಾರಕಿ ಚೈತ್ರ, ಮಲ್ಲಿಕಾರ್ಜುನ ಈಟೆ, ಮಾಜಿ ಅಧ್ಯಕ್ಷ ಶರಣಬಸಪ್ಪ, ಶರಣಪ್ಪ ಜಂಬ್ಯಾ ಹಾಗೂ ಗ್ರಾಮದ ಹಿರಿಯರು, ಮಹಿಳೆಯರು ಮತ್ತು ಸಾರ್ವಜನಿಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






















