
ಬೆಂಗಳೂರು, ಸೆ. ೧೦- ನಾಡಿನ ಸರ್ವಾಂಗೀಣ ಪ್ರಗತಿಗಾಗಿ ದೃಢ ಕರ್ನಾಟಕದ ಸಂಕಲ್ಪವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ತೊಟ್ಟಿದ್ದು, ಸೂರಿಲ್ಲದವರಿಗೆ ಉಚಿತವಾಗಿ ನಿವೇಶನ ನೀಡುವ ಹಾಗೂ ಸೈನಿಕ್ ಸಮ್ಮಾನ್ ಯೋಜನೆಯನ್ನು ಜಾರಿ ಮಾಡಲಾಗಿದೆ.
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿಂದು ಆಯೋಜಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ೧೦೦ ದಿನಗಳ ಯಶಸ್ವಿ ಪೂರೈಕೆಯ ಕರ್ನಾಟಕದ ಸಂಕಲ್ಪ ಕಾರ್ಯಕ್ರಮದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯವನ್ನು ಪ್ರಗತಿಯ ಹಾದಿಗೆ ಕೊಂಡೊಯ್ಯುವ ದೃಢ ಸಂಕಲ್ಪ ತೊಡಲಾಯಿತು.
ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ದೃಢ ಕರ್ನಾಟಕ ಸಂಕಲ್ಪ ನೂರು ದಿನಗಳ ಯಶಸ್ವಿ ಪೂರೈಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಆದಿಯಾಗಿ ಎಲ್ಲ ಸಚಿವರು ದೃಢ ಕರ್ನಾಟಕದ ಸಂಕಲ್ಪ ತೊಟ್ಟರು.
ಉಚಿತ ನಿವೇಶನ ಸೈನಿಕ್ ಸಮ್ಮಾನ್ ಯೋಜನೆ
ಇಂದಿನ ಈ ಕಾರ್ಯಕ್ರಮದಲ್ಲೇ ಗ್ರಾಮೀಣ ಭಾಗದಲ್ಲಿ ಸೂರಿಲ್ಲದವರಿಗೆ ಉಚಿತ ನಿವೇಶನ ಒದಗಿಸುವ ಯೋಜನೆ ಜಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ಕಡತಕ್ಕೆ ಸಹಿ ಹಾಕುವ ಮೂಲಕ ಯೋಜನೆ ಜಾರಿಯನ್ನು ಘೋಷಣೆ ಮಾಡಿದರು.
ಸೂರಿಲ್ಲದವರಿಗೆ ಉಚಿತ ನಿವೇಶನ ಹಾಗೂ ಸೈನಿಕ್ ಸಮ್ಮಾನ್ ಯೋಜನೆಗಳು ಇಂದಿನಿಂದಲೇ ಜಾರಿಗೆ ಬಂದಿದ್ದು, ಮೊದಲ ಹಂತದಲ್ಲಿ ೫ ಲಕ್ಷ ನಿವೇಶನಗಳನ್ನು ನಿವೇಶನ ರಹಿತರಿಗೆ ಹಂಚಲಾಗಿದ್ದು, ಮುಂದಿನ ದಿನಗಳಲ್ಲಿ ೧೫ ಲಕ್ಷ ನಿವೇಶನಗಳನ್ನು ನಿವೇಶನ ರಹಿತರಿಗೆ ಹಂಚಲಾಗುತ್ತದೆ.
ಅಭಿವೃದ್ಧಿಯೇ ನಮ್ಮ ಗುರಿ
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ. ಮುಂದಿನ ದಿನಗಳಲ್ಲಿ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುವ ಸಂಕಲ್ಪ ತೊಟ್ಟಿದ್ದೇವೆ ಎಂದು ಹೇಳಿ, ಸಂವಿಧಾನಬದ್ಧವಾಗಿ ರಾಗ, ದ್ವೇಷ ಅಸೂಯೆಗಳಿಲ್ಲದೆ ನಾಡಿನ ಪ್ರಗತಿಗೆ ಕೆಲಸ ಮಾಡುತ್ತೇವೆ. ನಾವು ನುಡಿದಂತೆ ನಡೆದಿದ್ದೇವೆ. ಮುಂದೆಯೂ ಅದೇ ಹಾದಿಯಲ್ಲಿ ಸರ್ಕಾರ ಸಾಗುತ್ತದೆ ಎಂದರು.
ಜನ ನೀತಿ, ಪ್ರಗತಿ ನಮ್ಮ ಧ್ಯೇಯೋದ್ಧೇಶವಾಗಿದೆ. ಒಟ್ಟಾಗಿ ಎಲ್ಲರೂ ನಾಡಿನ ಪ್ರಗತಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಅಭಿವೃದ್ಧಿಯ ಹಾದಿಯಲ್ಲಿ ನಾಡಿನ ನೆಲ, ಜನರ ಶ್ರಮ, ಯುವಕರ ಕನಸು ಇದನ್ನು ಸಾಕಾರಗೊಳಿಸುವ ಉದ್ದೇಶ ಹೊಂದಿದ್ದೇವೆ. ಪ್ರಗತಿ ನಮ್ಮ ದೃಢ ಸಂಕಲ್ಪ ಆಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ಮೂರು ವರ್ಷಗಳಲ್ಲಿ ಪಂಚ ಗ್ಯಾರಂಟಿಗಳ ಮೂಲಕ ಜನರ ಬದುಕನ್ನು ಹಸನು ಮಾಡುವ ಕೆಲಸ ಮಾಡಿದ್ದೇವೆ. ಪಂಚ ಗ್ಯಾರಂಟಿಗಳಿಗೆ ೧ ಕೋಟಿ ೪೫ ಲಕ್ಷ ೬೧೭ ಕೋಟಿ ರೂ.ಗಳನ್ನು ಇದುವರೆಗೂ ಖರ್ಚು ಮಾಡಿದ್ದೇವೆ ಎಂದು ಹೇಳಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ, ಅನ್ನಭಾಗ್ಯ, ಉದ್ಯೋಗ ಯೋಜನೆಗಳಿಗೆ ಖರ್ಚು ಮಾಡಿರುವ ಹಣದ ವಿವರ ಫಲಾನುಭವಿಗಳ ಸಂಖ್ಯೆ ಎಲ್ಲವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ನಾನು ಮುಖ್ಯಮಂತ್ರಿಯಾದ ನಂತರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ನೇಗಿಲ ಯೋಗಿ, ತೇಗದ ಸಿರಿ, ಸಿಎಂ ಉದ್ಯೋಗ ಸಂಕಲ್ಪ ಶಾಲಾ ಶಿಕ್ಷಣ ಉನ್ನತ ಕಲಿಕೆ, ೧ ಸಾವಿರ ಪಬ್ಲಿಕ್ ಶಾಲೆ ಆರಂಭ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿದ್ದೇನೆ ಎಂದು ಅವರು ಹೇಳಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ತಮ್ಮ ಭಾಷಣದಲ್ಲಿ ಬೆಳಕು ಚೆಲ್ಲಿದರು.
ಈ ಕಾರ್ಯಕ್ರಮದಲ್ಲಿ ಸಚಿವ ಸಂಪುಟದ ಎಲ್ಲ ಸಚಿವರು ಭಾಗಿಯಾಗಿದ್ದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ನೂರು ದಿನಗಳ ಸಾಧನೆಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹಾಗೆಯೇ ಸಾಂಕೇತಿಕವಾಗಿ ಐವರು ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಿಸಲಾಯಿತು.
ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಾಯಿತು. ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿರಿದ್ದರು.
ಸೇವಾ-ಒಂದು ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ
ಸರ್ಕಾರದ ವಿವಿಧ ಇಲಾಖೆಗಳ ಸೇವೆಯನ್ನು ಒಂದೇ ವೇದಿಕೆಯಲ್ಲಿ ತರುವ ಸೇವಾ-ಒಂದು ರೈತ ಚೈತನ್ಯ, ಶಾಲೆಗಳಿಗೆ ಸಿಎಸ್‌ಆರ್ ಪೋರ್ಟಲ್ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್. ಒನ್ – ಕರ್ನಾಟಕ ಮೊಬಿಲಿಟಿ ಆಪ್ ಯೋಜನೆಗೆ ಇಂದು ಚಾಲನೆ ನೀಡಲಾಯಿತು.
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ನಡೆದ ಡಿ.ಕೆ. ಶಿವಕುಮಾರ್ ನೇತೃತ್ವದ ನೂರು ದಿನಗಳ ಸಾಧನೆಯ ದೃಢ ಕರ್ನಾಟಕ ಸಂಕಲ್ಪ ನೂರು ದಿನಗಳ ಯಶಸ್ವಿ ಪೂರೈಕೆ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಯನ್ನು ಒಂದೇ ವೇದಿಕೆಯಲ್ಲಿ ತರುವ ಸೇವಾ-೧ ಆಪ್‌ನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಳು ಬಿಡುಗಡೆ ಮಾಡಿದರು.
ಈ ಆಪ್ ಮೂಲಕ ಸರ್ಕಾರದ ವಿವಿಧ ಇಲಾಖೆಗಳ ಸೇವೆಯನ್ನು ಒಂದೇ ವೇದಿಕೆಯಲ್ಲಿ ನಾಗರಿಕರು ಬಳಸಲು ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಈ ಕಾರ್ಯಕ್ರಮದಲ್ಲಿ ಬಿಎಂಟಿಸಿ-೨.೦ ಮೊಬೈಲ್ ಆಪ್‌ನ್ನು ಬಿಡುಗಡೆ ಮಾಡಲಾಯಿತು.


































