
ಬೀದರ್: ಮಾ.೧೦:ರಾಜ್ಯ ಬಜೆಟ್‌ನಲ್ಲಿ ಅಂಗವಿಕಲರ ಪ್ರಮುಖ ಬೇಡಿಕೆಗಳನ್ನು ಪರಿಗಣಿಸದೇ ಸರ್ಕಾರ ನಿರಾಸೆ ಮೂಡಿಸಿದೆ ಎಂದು ಸಾಮಾಜಿಕ ಹೋರಾಟಗಾರ ಸಂಗಮೇಶ ಭಾವಿದೊಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಅಂಗವಿಕಲರ ಮಾಶಾಸನ ಹೆಚ್ಚಳ, ಎಂಆರ್‌ಡಬ್ಲ್ಯೂ ಮತ್ತು ವಿಆರ್‌ಡಬ್ಲ್ಯೂ ಸಿಬ್ಬಂದಿಗಳ ಗೌರವಧನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಂಗವಿಕಲರ ಸಂಘಟನೆಗಳು ಹಾಗೂ ಸಾಮಾಜಿಕ ಚಿಂತಕರು ಹಲವು ಬಾರಿ ಹೋರಾಟ ನಡೆಸಿದ್ದರು. ಜೊತೆಗೆ ಶಕ್ತಿ ಯೋಜನೆಯಡಿಯಲ್ಲಿ ಅಂಗವಿಕಲರಿಗೆ ಉಚಿತ ಬಸ್ ಸೇವೆ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಸಹ ಸರ್ಕಾರದ ಮುಂದೆ ಇಟ್ಟಿದ್ದರು. ಆದರೆ ಈ ಎಲ್ಲ ಬೇಡಿಕೆಗಳನ್ನು ರಾಜ್ಯ ಬಜೆಟ್‌ನಲ್ಲಿ ಪರಿಗಣಿಸದೇ ಸರ್ಕಾರ ಅಂಗವಿಕಲರನ್ನು ನಿರಾಸೆಗೊಳಿಸಿದೆ ಎಂದು ಅವರು ಆರೋಪಿಸಿದರು.
ಸರ್ಕಾರ ಅಂಗವಿಕಲರನ್ನು “ವಿಶೇಷ ಚೇತನರು” ಎಂದು ನಾಮಕರಣ ಮಾಡಿರುವುದನ್ನು ಮಾತ್ರ ಹೊರತುಪಡಿಸಿ, ಅವರು ಹೇಳಿಕೊಳ್ಳುವಂತಹ ಯಾವುದೇ ವಿಶೇಷ ಸೌಲಭ್ಯಗಳನ್ನು ನೀಡಿಲ್ಲ. ಇದರಿಂದ ಇಡೀ ರಾಜ್ಯದ ಅಂಗವಿಕಲರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎಂದು ಹೇಳಿದರು.
ಬಹು ವರ್ಷಗಳಿಂದ ಅಂಗವಿಕಲರ ಮಾಶಾಸನ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಅವರ ಕೂಗಿಗೆ ಸ್ಪಂದಿಸಿಲ್ಲ. ಆದ್ದರಿಂದ ಅಂಗವಿಕಲರ ಪರವಾಗಿ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಂಗಮೇಶ ಭಾವಿದೊಡ್ಡಿ ತಿಳಿಸಿದ್ದಾರೆ.




















